ಧರ್ಮಸ್ಥಳ: ಬಿಗ್‌ಬಾಸ್ ಮನೆಯಲ್ಲಿ ‘ಅಂಕಲ್’ ಎಂದೇ ಕರೆಸಿಕೊಂಡಿದ್ದ ನಟ ಉಗ್ರಂ ಮಂಜು (ಮಂಜುನಾಥ್ ಗೌಡ) ಇದೀಗ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ‘ಉಗ್ರಂ’ ಸಿನಿಮಾದ ಮೂಲಕ ಖಳನಟನಾಗಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದ ಮಂಜು, ನಿನ್ನೆ (ಜ.23) ತಮ್ಮ ಜೀವನ ಸಂಗಾತಿ ಸಂಧ್ಯಾ ಅವರೊಂದಿಗೆ ಧರ್ಮಸ್ಥಳದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಕಠಿಣ ಮಾತುಗಳ ಮಧ್ಯೆಯೂ ಮಾನವೀಯತೆ ತೋರಿಸಿದ್ದ ಉಗ್ರಂ ಮಂಜು, ಹೊರಗಿನಿಂದ ಗಂಭೀರವಾಗಿ ಕಾಣಿಸಿದರೂ ಒಳಗೆ ಹೃದಯವಂತ ಎಂಬುದನ್ನು ಸಾಕಷ್ಟು ಬಾರಿ ಸಾಬೀತುಪಡಿಸಿದ್ದರು. ಅದೇ ‘ಅಂಕಲ್’ ಈಗ ಗಂಡನಾಗಿ, ಕುಟುಂಬದ ಹೊಣೆಗಾರಿಕೆಯನ್ನು ಹೊರುವ ಹೊಸ ಪಾತ್ರಕ್ಕೆ ಕಾಲಿಟ್ಟಿದ್ದಾರೆ.

ವಧು ಸಂಧ್ಯಾ ಅವರು ಸ್ಪರ್ಶ್ ಆಸ್ಪತ್ರೆಯಲ್ಲಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಮಾಜ ಸೇವೆಯ ಮನೋಭಾವದೊಂದಿಗೆ ವೈದ್ಯಕೀಯ ಕ್ಷೇತ್ರದಲ್ಲೂ ತಮ್ಮದೇ ಗುರುತು ಹೊಂದಿದ್ದಾರೆ.

ಉಗ್ರಂ ಮಂಜು–ಸಂಧ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಈ ಶುಭ ಸಂದರ್ಭದಲ್ಲಿ, ಅಭಿಮಾನಿಗಳು, ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರು ಶುಭಾಶಯಗಳ ಸುರಿಮಳೆ ಸುರಿಸುತ್ತಿದ್ದಾರೆ.
