ಕುಂದಾಪುರ: ಮರಣದ ತಿರುವು ಎಂದೇ ಕುಖ್ಯಾತಿ ಪಡೆದಿರುವ ಕುಂದಾಪುರ ತಾಲೂಕಿನ ಶೆಟ್ರಕಟ್ಟೆ ತಿರುವಿನಲ್ಲಿ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಸವಾರ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಮೃತರನ್ನು ಸೌಕೂರು ನಿವಾಸಿ ವಿಜಯ್ ದೇವಾಡಿಗ (26) ಎಂದು ಗುರುತಿಸಲಾಗಿದೆ. ತ್ರಾಸಿಯಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದ ವಿಜಯ್, ಶನಿವಾರ ಬೆಳಿಗ್ಗೆ ಆಹಾರ ವಸ್ತುಗಳನ್ನು ಖರೀದಿಸಿ ಬೈಕಿನಲ್ಲಿ ತಲ್ಲೂರು ಮೂಲಕ ಸೌಕೂರು ಕಡೆಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಶೆಟ್ರಕಟ್ಟೆ ತಿರುವಿನಲ್ಲಿ ಖಾಸಗಿ ಬಸ್‌ವೊಂದನ್ನು ಓವರ್‌ಟೇಕ್ ಮಾಡುವ ಸಂದರ್ಭದಲ್ಲೇ ಎದುರಿನಿಂದ ಬಂದ ಮತ್ತೊಂದು ಖಾಸಗಿ ಬಸ್‌ಗೆ ಬೈಕ್ ಮುಖಾಮುಖಿಯಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ತೀವ್ರತೆಗೆ ವಿಜಯ್ ರಸ್ತೆ ಮೇಲೆ ಉರುಳಿದ್ದು, ಗಂಭೀರ ಗಾಯಗಳೊಂದಿಗೆ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.

ಈ ತಿರುವಿನಲ್ಲಿ ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿರುವುದರಿಂದ, ಸ್ಥಳವು ‘ಮರಣದ ತಿರುವು’ ಎಂಬ ಹೆಸರನ್ನು ಪಡೆದುಕೊಂಡಿದೆ. ವೇಗ, ನಿರ್ಲಕ್ಷ್ಯ ಚಾಲನೆ ಹಾಗೂ ಅಪಾಯಕಾರಿ ಓವರ್‌ಟೇಕ್‌ಗಳು ಇಲ್ಲಿ ನಿರಂತರ ಜೀವಹಾನಿಗೆ ಕಾರಣವಾಗುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಒಂದು ಕ್ಷಣದ ನಿರ್ಲಕ್ಷ್ಯ ಜೀವವನ್ನೇ ಕಿತ್ತುಕೊಳ್ಳುತ್ತದೆ ಎಂಬುದಕ್ಕೆ ಈ ಘಟನೆ ಮತ್ತೊಂದು ನಿದರ್ಶನವಾಗಿದೆ. ಈ ಸಂಬಂಧ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

