ಮುಂಬೈ: ಮುಂಬೈ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟ ಅಮೀರ್ ಖಾನ್ ಅವರ ಮಗಳು ಐರಾ ಖಾನ್ ಅವರ ವಸ್ತ್ರಧಾರಣೆ ಕುರಿತು ಒಬ್ಬ ಪತ್ರಕರ್ತ ಮಾಡಿದ ಕಮೆಂಟ್ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.

ಐರಾ ಖಾನ್ ಅವರು ಮ್ಯಾರಥಾನ್ ವೇಳೆ ಸ್ಲೀವ್‌ಲೆಸ್ ಟಿ-ಶರ್ಟ್ ಧರಿಸಿರುವ ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್ ಫಿಟ್ನೆಸ್ ಹಾಗೂ ಆರೋಗ್ಯದ ಜಾಗೃತಿ ಮೂಡಿಸುವ ಉದ್ದೇಶದ ಭಾಗವಾಗಿತ್ತು. ಆದರೆ, ಈ ಚಿತ್ರವನ್ನು ಆಧರಿಸಿ ಒಬ್ಬ ಪತ್ರಕರ್ತರು ಬಾಡು ಶೇಮಿಂಗ್ ಮತ್ತು ವಸ್ತ್ರಧಾರಣೆಯ ಹೆಸರಿನಲ್ಲಿ ಟೀಕೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಆ ಪತ್ರಕರ್ತರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕಮೆಂಟ್‌ನಲ್ಲಿ, “ಇದು ಐರಾ ಖಾನ್, ಅಮೀರ್ ಖಾನ್ ಅವರ ಮಗಳು. ಸಮಸ್ಯೆ ಬಟ್ಟೆಯಲ್ಲಿ ಇಲ್ಲ, ಆ ಬಟ್ಟೆ ಧರಿಸಿರುವ ದೇಹದಲ್ಲಿದೆ. ಕೆಲವರು ತಮ್ಮ ದೇಹಕ್ಕೆ ಸೂಕ್ತವಲ್ಲದ ಬಟ್ಟೆಗಳನ್ನು ಏಕೆ ಧರಿಸುತ್ತಾರೆ ಎಂಬುದು ನನಗೆ ಅರ್ಥವಾಗುವುದಿಲ್ಲ. ಸಾರ್ವಜನಿಕವಾಗಿ ಕೆಟ್ಟ ರೀತಿಯಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಶೈಲಿಯ ಹೆಸರಿನಲ್ಲಿ ಇದನ್ನು ಸಮರ್ಥಿಸಿಕೊಳ್ಳಬಹುದು” ಎಂದು ಬರೆದಿದ್ದಾರೆ.

ಈ ಟಿಪ್ಪಣಿಗಳು ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿ, ವ್ಯಾಪಕ ಟೀಕೆಗೆ ಗುರಿಯಾಗಿವೆ. ಇದು ಬಾಡಿ ಶೇಮಿಂಗ್ ಎಂದು ಹಲವರು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಟ ಅಭಿನವ್ ಶುಕ್ಲಾ ಕೂಡ ಈ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಾಮಾಜಿಕ ಮಾಧ್ಯಮದಲ್ಲಿ ಪತ್ರಕರ್ತನ ಹೇಳಿಕೆಯನ್ನು ಖಂಡಿಸಿದ್ದಾರೆ.
“ಅವಳು ತಾರೆಯ ಮಗಳು. ನಟಿಸಲು ಆಸಕ್ತಿ ಇಲ್ಲ. ಶೋ-ಆಫ್ ಮಾಡುವ ಸ್ವಭಾವವೂ ಇಲ್ಲ. ಐದು ಬೌನ್ಸರ್‌ಗಳೊಂದಿಗೆ ಓಡಾಡುವ ಜೀವನವೂ ಇಲ್ಲ. ಸಾಮಾನ್ಯ ವ್ಯಕ್ತಿಯಂತೆ ಬಟ್ಟೆ ಧರಿಸಿ, ರಿಕ್ಷಾದಲ್ಲೇ ಪ್ರಯಾಣಿಸುತ್ತಾಳೆ. ಅದರಲ್ಲಿ ತಪ್ಪೇನು? ಆರೋಗ್ಯಕರವಾಗಿರಲು, ಸಕ್ರಿಯವಾಗಿರಲು ಅವಳು ಪ್ರಯತ್ನಿಸುತ್ತಿದ್ದಾಳೆ. ಇದನ್ನು ಟೀಕಿಸುವ ಅಗತ್ಯವೇನು?” ಎಂದು ಅಭಿನವ್ ಶುಕ್ಲಾ ಪ್ರಶ್ನಿಸಿದ್ದಾರೆ.

ಐರಾ ಖಾನ್ ಅವರ ವಸ್ತ್ರಧಾರಣೆಯ ಹೆಸರಿನಲ್ಲಿ ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ರೀತಿಯ ಟೀಕೆಗಳು ನಡೆಯುತ್ತಿರುವುದನ್ನು ಅನೇಕರು ಖಂಡಿಸಿದ್ದು, ಮಹಿಳೆಯರ ದೇಹ ಮತ್ತು ಆಯ್ಕೆಗಳ ಕುರಿತು ಗೌರವ ಇರಬೇಕು ಎಂಬ ಅಭಿಪ್ರಾಯಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವ್ಯಕ್ತವಾಗುತ್ತಿವೆ.