ಸಂಸ್ಕೃತಿ, ಕ್ರೀಡೆ, ಸಶಕ್ತೀಕರಣ: ಫೆ.1–2ರವರೆಗೆ ಮಂಗಳೂರಲ್ಲಿ ಮಹಿಳಾಮಣಿಗಳ ಮಹಾ ಪವರ್‌ ಶೋ!

ಮಂಗಳೂರು: ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ)ದ ವತಿಯಿಂದ ಫೆಬ್ರವರಿ 1 ಮತ್ತು 2ರಂದು ‘ಮಹಿಳಾ ವೈಭವ’ – ಕರ್ನಾಟಕ ರಾಜ್ಯ ಮಹಿಳಾ ಜಾನಪದ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸಮ್ಮೇಳನವನ್ನು ಮಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷೆ ಚಂಚಲಾ ತೇಜೋಮಯ ತಿಳಿಸಿದರು.


ಅವರು ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರಕಾರ ಮಹಿಳೆಯರ ಅಭಿವೃದ್ಧಿಗಾಗಿ ಜಾರಿಗೊಳಿಸಿರುವ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸಿ, ಅವುಗಳ ಫಲಾನುಭವಿಗಳನ್ನಾಗಿಸುವಲ್ಲಿ ಒಕ್ಕೂಟವು ಮಹತ್ತರ ಪಾತ್ರ ವಹಿಸಿದೆ. ನಾಲ್ಕು ದಶಕಗಳ ಸಾಧಕ ಕಾರ್ಯಕ್ರಮಗಳ ಮೂಲಕ ಯಶಸ್ಸಿನ ಪಥದಲ್ಲಿ ಸಾಗುತ್ತಿರುವ ಒಕ್ಕೂಟವು ಇದೀಗ ರಾಜ್ಯದ 31 ಜಿಲ್ಲೆಗಳ ಮಹಿಳೆಯರನ್ನು ಒಗ್ಗೂಡಿಸುವ ಉದ್ದೇಶದಿಂದ ರಾಜ್ಯಮಟ್ಟದ ಮಹಿಳಾ ಸಮ್ಮೇಳನವನ್ನು ಆಯೋಜಿಸಿದೆ ಎಂದು ತಿಳಿಸಿದರು.

ಫೆಬ್ರವರಿ 1ರಂದು ಬೆಳಿಗ್ಗೆ 8.30ಕ್ಕೆ ಬಲ್ಮಠ ಯು.ಬಿ.ಎಂ.ಸಿ ಮೈದಾನ (ಶಾಂತಿ ನಿಲಯ)ದಿಂದ ನೆಹರೂ ಮೈದಾನದವರೆಗೆ ವಿವಿಧ ರಾಜ್ಯಗಳ ಹಾಗೂ ಜಿಲ್ಲೆಗಳ ಸಾಂಪ್ರದಾಯಿಕ ವೇಷಭೂಷಣಗಳಿಂದ ಅಲಂಕೃತರಾದ ಮಹಿಳೆಯರ ಭರ್ಜರಿ ಜಾಥಾ ನಡೆಯಲಿದೆ ಎಂದರು.

ನಂತರ ನೆಹರೂ ಮೈದಾನದಲ್ಲಿ ಜಾನಪದ ಕ್ರೀಡೋತ್ಸವದ ಅಂಗವಾಗಿ ಮಹಿಳೆಯರ ಹಗ್ಗ ಜಗ್ಗಾಟ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ. ಆ ಬಳಿಕ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಾಂಸ್ಕೃತಿಕ ಸಮ್ಮೇಳನ–2026 ನಡೆಯಲಿದ್ದು, ಸಾಂಸ್ಕೃತಿಕ ಸ್ಪರ್ಧೆಗಳು, ವಿಚಾರಗೋಷ್ಠಿಗಳು, ಮಹಿಳೆಯರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಆಹಾರ ಮೇಳ, ಮಹಿಳೆಯರ ಆರೋಗ್ಯ ತಪಾಸಣೆ, ಅಂಗಾಂಗ ದಾನ ನೋಂದಣಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ರಾಜ್ಯದ ವಿವಿಧ ಜಿಲ್ಲೆಗಳ ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಪ್ರಥಮ ಬಹುಮಾನ – ರೂ. 1,00,000/-, ದ್ವಿತೀಯ – ರೂ. 75,000/-, ತೃತೀಯ – ರೂ. 50,000/- ಹಾಗೂ ಭಾಗವಹಿಸುವ ತಂಡಗಳಿಗೆ ರೂ. 10,000/- ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಮಹಿಳಾ ಸಶಕ್ತಿಕರಣಕ್ಕೆ ಅಮೂಲ್ಯ ಕೊಡುಗೆ ನೀಡಿದ ಸಾಧಕಿಯರಿಗೆ ‘ಕರ್ನಾಟಕ ರಾಜ್ಯ ಮಹಿಳಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿಯಲ್ಲಿ ರೂ. 1,00,000/- ನಗದು, ಫಲಕ ಹಾಗೂ ಗೌರವಪತ್ರ ಒಳಗೊಂಡಿರುತ್ತದೆ. ಯುವ ಸಾಹಿತಿಗಳ ಬರವಣಿಗೆಯನ್ನು ಉತ್ತೇಜಿಸುವ ಉದ್ದೇಶದಿಂದ 35 ವರ್ಷಗಳೊಳಗಿನ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಲೇಖನ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿ ಸಮ್ಮೇಳನದಲ್ಲಿ ಗೌರವಿಸಲಾಗುವುದು ಎಂದರು.

ಸಮ್ಮೇಳನದಲ್ಲಿ ಮಾನ್ಯ ಸಭಾಪತಿಗಳು, ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು ಹಾಗೂ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಸಮಾಜದ ಜ್ವಲಂತ ಸಮಸ್ಯೆಗಳ ಕುರಿತು ಪ್ರಮುಖ ಸಂಪನ್ಮೂಲ ವ್ಯಕ್ತಿಗಳೊಂದಿಗೆ ವಿಚಾರಗೋಷ್ಠಿಗಳು ನಡೆಯಲಿದ್ದು, ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಚಂಚಲಾ ತೇಜೋಮಯ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಮನೋರಮ ಉಮೇಶನ್, ಕಾರ್ಯದರ್ಶಿ ಅನುರಾಧ, ಖಜಾಂಜಿ ಭಾರತಿ, ರೇಖಾ ಶೆಟ್ಟಿ, ವಿಜಯಲಕ್ಷ್ಮಿ ಹಾಗೂ ಸುಖಲಾಕ್ಷ ಸುವರ್ಣ ಉಪಸ್ಥಿತರಿದ್ದರು.

error: Content is protected !!