IPL 2026: 19ನೇ ಆವೃತ್ತಿಯ ಐಪಿಎಲ್ ವೇಳಾಪಟ್ಟಿ ಎರಡು ಹಂತಗಳಲ್ಲಿ ಪ್ರಕಟ; ಮಾ.28ಕ್ಕೆ ಪಂದ್ಯಾಟಕ್ಕೆ ಚಾಲನೆ

ಹೊಸದಿಲ್ಲಿ: ಟಿ20 ವಿಶ್ವಕಪ್‌ ಬೆನ್ನಲ್ಲೇ 19ನೇ ಆವೃತ್ತಿಯ ಐಪಿಎಲ್‌ ವೇಳಾಪಟ್ಟಿಯನ್ನೂ ಮಾ.13ರೊಳಗೆ ಪ್ರಕಟಿಸಲು ಬಿಸಿಸಿಐ ಸಿದ್ಧವಾಗಿದೆ. ಆದರೆ ಈ ಬಾರಿ ಒಂದೇ ಬಾರಿಗೆ ಐಪಿಎಲ್‌ನ ಸಂಪೂರ್ಣ ವೇಳಾಪಟ್ಟಿ ಪ್ರಕಟವಾಗುವ ಬದಲು 2 ಹಂತಗಳಲ್ಲಿ ವೇಳಾಪಟ್ಟಿ ಪ್ರಕಟಗೊಳ್ಳಲಿದೆ. ಮೊದಲ ಹಂತದಲ್ಲಿ ಆರಂಭಿಕ 20 ಪಂದ್ಯಗಳ ವೇಳಾಪಟ್ಟಿ ಪ್ರಕಟಗೊಳ್ಳಲಿದೆ.

ಐಪಿಎಲ್‌ ವೇಳಾಪಟ್ಟಿಯ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ, ಆರಂಭಿಕ 20 ಪಂದ್ಯಗಳ ವೇಳಾಪಟ್ಟಿಯನ್ನು ಇನ್ನು 2-3 ದಿನಗಳಲ್ಲಿ ಪ್ರಕಟಿಸುತ್ತೇವೆ. ಕೆಲವು ರಾಜ್ಯಗಳ ಚುನಾವಣ ವೇಳಾಪಟ್ಟಿಯನ್ನು ಪರಿಗಣಿಸಿ ಇನ್ನುಳಿದ ಐಪಿಎಲ್‌ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸುತ್ತೇವೆ ಎಂದಿದ್ದಾರೆ.

ಅಸ್ಸಾಂ, ಪಶ್ಚಿಮ ಬಂಗಾಲ, ತಮಿಳುನಾಡು ಮತ್ತು ಕೇರಳ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಗಮನಿಸಿಕೊಂಡು 2ನೇ ಹಂತದ ಐಪಿಎಲ್‌ ವೇಳಾಪಟ್ಟಿಯನ್ನು ಸಿದ್ಧಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಹೀಗಾಗಿ ಆರಂಭಿಕ ಹಂತದಲ್ಲಿ 20 ಪಂದ್ಯಗಳ ವೇಳಾಪಟ್ಟಿಯಷ್ಟೇ ಪ್ರಕಟವಾಗಲಿದೆ.

ಈ ಬಾರಿಯ ಐಪಿಎಲ್‌ ಮಾ.28ಕ್ಕೆ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಉದ್ಘಾಟನ ಪಂದ್ಯದೊಂದಿಗೆ ಆರಂಭಗೊಳ್ಳಲಿದೆ. ಅಸಲಿಗೆ ಟೂರ್ನಿ ಮಾ.26ಕ್ಕೆ ಶುರುವಾಗುವ ಸಾಧ್ಯತೆಯಿತ್ತು. ಆದರೆ ಪಂದ್ಯಾವಳಿಯ ಆರಂಭವನ್ನು ಬಿಸಿಸಿಐ 2 ದಿನ ಮುಂದೂಡಿದೆ.

error: Content is protected !!