ಅಡ್ಡಪಾಡಿ ದೈವಂಗಳಗುಡ್ಡೆ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ: ಮಾರ್ಚ್15ರಿಂದ ಧಾರ್ಮಿಕ ಕಾರ್ಯಕ್ರಮಗಳು

ಮಂಗಳೂರು: ಅಡ್ಡಪಾಡಿ ದೈವಂಗಳಗುಡ್ಡೆಯ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕವು ಮಾರ್ಚ್ 20ರಂದು ಶುಕ್ರವಾರ ಪೂರ್ವಾಹ್ನ 9.50ರಿಂದ 11 ಗಂಟೆಯವರೆಗೆ ವೃಷಭ ಲಗ್ನದ ಸುಮುಹೂರ್ತದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಕಾರ್ಯಾಧ್ಯಕ್ಷ, ಮಾಜಿ ಸಚಿವ,ದೇವಸ್ಥಾನದ ಕಾರ್ಯಾಧ್ಯಕ್ಷ ಬೈಲುಮೇಗಿನ ಮನೆ ಬಿ. ನಾಗರಾಜ ಶೆಟ್ಟಿ ತಿಳಿಸಿದರು.

ದೇವಸ್ಥಾನದ ಪ್ರಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರತೀ 12 ವರ್ಷಕ್ಕೊಮ್ಮೆ ನಡೆಯುವ ಬ್ರಹ್ಮಕಲಶೋತ್ಸವದ ಇದು ನಾಲ್ಕನೇ ಕಾರ್ಯಕ್ರಮವಾಗಿದ್ದು, ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ಸುಮಾರು 3.4 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು. ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ಪ್ರಸಾದವನ್ನು ಸ್ವೀಕರಿಸಬೇಕು ಹಾಗೂ ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಮಾರ್ಚ್ 15 ರಿಂದ 20ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್ 18ರಂದು ರುದ್ರಯಾಗ ಹಾಗೂ ಮಾರ್ಚ್ ೧೯ರಂದು ಸಹಸ್ರ ನಾಲಿಕೇರ ಮಹಾಗಣಪತಿ ಹೋಮ ನಡೆಯಲಿದ್ದು, ವೇದಮೂರ್ತಿ ಬ್ರಹ್ಮಶ್ರೀ ಕುಯ್ಯಾರು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ವೈದಿಕ ಸತ್ಕರ್ಮಗಳು ನಡೆಯಲಿವೆ ಎಂದರು.

ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಬೈಲುಮಾಗಣೆಯ ಅಡ್ಡಪಾಡಿ ಪ್ರದೇಶದಲ್ಲಿರುವ ಈ ಪುಣ್ಯಕ್ಷೇತ್ರವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಭಕ್ತರ ಮನೋಭೀಷ್ಟಗಳನ್ನು ಅನುಗ್ರಹಿಸುವ ಕ್ಷೇತ್ರವಾಗಿದೆ ಎಂದರು. ಹಿಂದಿನ ಕಾಲದಲ್ಲಿ ಜೈನರ ಆಡಳಿತದಲ್ಲಿದ್ದ ಈ ದೇವಾಲಯವನ್ನು ನಂತರ ಸ್ಥಳೀಯ ಮನೆತನದವರು ಖರೀದಿಸಿ ಅಭಿವೃದ್ಧಿಪಡಿಸಿದ್ದು, ಇಂದಿಗೆ ಆಸ್ತಿಕರ ಶ್ರದ್ಧಾ ಕೇಂದ್ರವಾಗಿ ಬೆಳೆಯುತ್ತಿದೆ ಎಂದು ಹೇಳಿದರು.

ದೇವಸ್ಥಾನದಲ್ಲಿ ಮದುವೆ, ಉಪನಯನ ಮುಂತಾದ ಕಾರ್ಯಕ್ರಮಗಳಿಗೆ 18 ಸಾವಿರ ಚದರ ಅಡಿ ವಿಸ್ತೀರ್ಣದ ಸಭಾಂಗಣ, ಆಸನ ವ್ಯವಸ್ಥೆ, ಪಾಕಶಾಲೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಕಳೆದ 25 ವರ್ಷಗಳಿಂದ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಈ ವರ್ಷದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇಚ್ಛಾಶಕ್ತಿ ಮತ್ತು ಭಕ್ತಿಯಿಂದಾಗಿ ಮಂಜುನಾಥ ಭಂಡಾರಿ ಶೆಡ್ಡೆ ಅವರ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯ ನಡೆದಿದೆ ಎಂದು ಹೇಳಿದರು.

ಹೊರೆಕಾಣಿಕೆ ಸಮಿತಿ ಅಧ್ಯಕ್ಷ ರಮಾನಾಥ ಅತ್ತಾರ್ (ಚಿತ್ತಣ್ಣ) ಏತಮೊಗರುಗುತ್ತು ಮಾತನಾಡಿ, ಮಾರ್ಚ್ 15 ರಂದು ಬೆಳಿಗ್ಗೆ 11 ಗಂಟೆಗೆ ಉಗ್ರಾಣ ಮಹೂರ್ತ ಹಾಗೂ ಸಂಜೆ 3 ಗಂಟೆಗೆ ಅದ್ಧೂರಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದರು.

ಗುಡ್ಡೆಗುತ್ತು ಭುಜಂಗ ಶೆಟ್ಟಿ ಮಾತನಾಡಿ, ಈ ಪ್ರದೇಶವು ಹಿಂದಿನ ಕಾಲದಲ್ಲಿ ಪುತ್ತಿಗೆ ಚೌಟ ಮನೆತನದ ಆಡಳಿತದಲ್ಲಿದ್ದು, ಆಗ ಕುಗ್ರಾಮವಾಗಿತ್ತು. ಈಗ ದೇವಸ್ಥಾನದ ಅಭಿವೃದ್ಧಿಯೊಂದಿಗೆ ಪ್ರದೇಶವೂ ಅಭಿವೃದ್ಧಿಯಾಗಿದೆ. ಉತ್ಸವದ ಸಂದರ್ಭದಲ್ಲಿ ಭಕ್ತರಿಗೆ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಆಡಳಿತ ಮೊಕ್ತೇಸರ ಎ. ಮಂಜುನಾಥ ಭಮಡಾರಿ ಶೆಡ್ಯೆ, ಸಮಿತಿಯ ಕಾರ್ಯಾಧ್ಯಕ್ಷ ಏತಮೊಗರು ದೊಡ್ಡಮನೆ ಬೈಲುಮೂಡುಕರೆ ಹರೀಶ್ ಶೆಟ್ಟಿ, ರಮಾನಾಥ ಅತ್ತರ್, ರಾಜೀವ ಆಳ್ವ, ದೇವದಾಸ ನಾಯಕ್, ಮಹಿಳಾ ಸಮಿತಿಯ ಆಶಾ ಜ್ಯೋತಿ ರೈ, ಕೋಶಾಧಿಕಾರಿಗಳಾದ ಸಂಜಿತ್ ಶೆಟ್ಟಿ ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಸ್ವಾಗತಿಸಿ ದೇವಸ್ಥಾನದ ಪರಿಚಯ ನೀಡಿದರು. ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ ವಂದಿಸಿದರು.

error: Content is protected !!