
ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಇಂದು(ಜ.24) ಭಾಗಿಯಾಗಬೇಕಿದ್ದ ಕಾರ್ಯಕ್ರಮದ ಆರಂಭಕ್ಕೂ ಮುನ್ನವೇ ವೇದಿಕೆ ಮುಂಭಾಗದಲ್ಲಿ ಹಾಕಿದ್ದ ನಾಯಕರ ಕಟೌಟ್ ಕುಸಿತವಾಗಿ ಮೂವರು ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ನಡೆದಿದೆ.

ಸಿಎಂ ಅವರ ವಿಶೇಷ ಅನುದಾನದಲ್ಲಿ ಪೂರ್ಣಗೊಂಡಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ(ನ)ಯಡಿ ಮಂಡಳಿ ವತಿಯಿಂದ ರಾಜ್ಯಾದ್ಯಂತ ನಿರ್ಮಾಣಗೊಳ್ಳುತ್ತಿರುವ 1,80,253 ಮನೆಗಳ ಪೈಕಿ 2ನೇ ಹಂತದ 42,345 ಮನೆಗಳ ಲೋಕಾರ್ಪಣೆ ಕಾರ್ಯಕ್ರಮ ಇಂದು(ಜ.24) ನಡೆಯಲಿದೆ.


ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ವಸತಿ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿದ್ದು, ಮಂಡಳಿಯು ರಾಜ್ಯಾದ್ಯಂತ ಬರುವ ಮಹಾನಗರ, ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ಬರುವ ಕೊಳಗೇರಿ ಪ್ರದೇಶಗಳನ್ನು ಗುರುತಿಸಿ ಮಂಡಳಿಯ ಕಾಯ್ದೆಯನ್ವಯ ಘೋಷಣೆ ಹೊರಡಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 3025 ಕೊಳಗೇರಿ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 2866 ಪ್ರದೇಶಗಳನ್ನು ಕೊಳಗೇರಿ ಪ್ರದೇಶವೆಂದು ಘೋಷಿಸಲಾಗಿದ್ದು, ಸದರಿ ಕೊಳಗೇರಿ ಪ್ರದೇಶಗಳಲ್ಲಿ ಮಂಡಳಿ ವತಿಯಿಂದ ಕೊಳಗೇರಿ ಸುಧಾರಣೆ ಯೋಜನೆಯಡಿ ಮೂಲಭೂತ ಸೌಲಭ್ಯ & ವಸತಿ ಯೋಜನೆಯಡಿ ಮನೆಗಳ ನಿರ್ಮಾಣ ಕೈಗೊಳ್ಳಲಾಗುತ್ತಿದೆ.