ಅವರು ಸ್ಟೇಜ್ ಮೇಲೆ ದೊಡ್ಡ ನಟಿ ಅಲ್ಲ. ಟಿವಿ ಸೀರಿಯಲ್‌ಗಳ ಹೀರೋಯಿನ್ ಕೂಡ ಅಲ್ಲ. ಆದರೆ… ಮೊಬೈಲ್ ಸ್ಕ್ರೀನ್‌ನ ಪುಟ್ಟ ಚೌಕಟ್ಟಿನೊಳಗೆ ಸಾವಿರಾರು ಜನರ ಮನಸ್ಸಿಗೆ ನಗು ತುಂಬಿದವರು. ಅವರ ಹೆಸರು – ಆಶಾ ಪಂಡಿತ್.

ಮಂಗುಳಿ ಮುಸುಂಟು, ಮರ್ವಾಯಿ ಮುಸುಂಟು, ಕಂದೋಡಿ ಮುಸುಂಟು, ಕೊರಂಗ್ ಮುಸುಂಟು… ಇವು ಕೇವಲ ಬೈಗುಳಗಳಾಗಿರಲಿಲ್ಲ. ಅವು ಕರಾವಳಿಯ ಬದುಕಿನ ನಿಜವಾದ ಧ್ವನಿಗಳು. ಬೀದಿಯ ಭಾಷೆ, ಕ್ಯಾಂಟೀನ್‌ನ ನಗು, ಬಡತನದ ನಡುವೆ ಹುಟ್ಟಿದ ಹಾಸ್ಯ – ಇದಲ್ಲದೆ, ಅವರ ನಗುವಿನಲ್ಲಿ ಬದುಕಿನ ಸತ್ಯಗಳು ಮುದ್ರಿತರಾಗುತ್ತವೆ.
ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಸುಂದರವಾಗಿರಬೇಕು, ಯೌವನದಲ್ಲಿರಬೇಕು, ‘ಪರ್ಫೆಕ್ಟ್’ ಆಗಿರಬೇಕು ಎನ್ನುವ ಕಾಲದಲ್ಲಿ, “ನಾನು ಹೀಗೇ” ಎಂದು ಧೈರ್ಯವಾಗಿ ನಿಂತವರು ಆಶಾ.
ಅವರು ‘ಅಜ್ಜಿ’ ಅಂತ ಕರೆದರು. “ಲಿಪ್‌ಸ್ಟಿಕ್ ಯಾಕೆ?”, “ಹುಬ್ಬಿಗೆ ಕಾಡಿಗೆ ಏಕೆ?”, “ಈ ವಯಸ್ಸಲ್ಲಿ ರೀಲ್ಸ್ ಬೇಕಾ?” – ನಾನಾ ಪ್ರಶ್ನೆಗಳ ಎದುರಿಸುತ್ತಾ, ಆಶಾ ತಲೆಕೆಡಿಸದೇ ನಗುತ್ತಾ ಮುಂದೆ ಸಾಗಿದರು.

ಆಶಾ ಪಂಡಿತ್ ಎನ್ನುವುದು ಕೇವಲ ಒಂದು ಹೆಸರು ಅಲ್ಲ. ಅದು ಒಂದು ಮನಸ್ಥಿತಿ. ಬಡತನದ ನಡುವೆ ಹುಟ್ಟಿದ ಧೈರ್ಯ. ಅವಮಾನಗಳ ನಡುವೆ ಮೂಡಿದ ನಗು.
ಆಶಾಕ್ಕ ಅತ್ತುಕೊಂಡಿಲ್ಲ, ವಿಕ್ಟಿಂ ಕಾರ್ಡ್ ಆಡಲಿಲ್ಲ. ತುಳುವಿನಲ್ಲಿ ನಗುತ್ತಾ ಬೈದರು. ಆ ಬೈಗುಳದಲ್ಲೂ ಮಾನವೀಯತೆ ಇತ್ತು. ನೋವನ್ನು ನಗುವಾಗಿಸುವುದೇ ಅವರ ಕಲೆಯಾಗಿತ್ತು.
ಮಂಗಳೂರಿನ ಅಳಪೆ ಬಳಿ ಒಂದು ಸಣ್ಣ ಟೆಂಟ್, ಅದರೊಳಗೆ ಚಿಕ್ಕ ಕ್ಯಾಂಟೀನ್. ಸಹಾಯಕ ಸುಂದರನ ಜೊತೆ ಚರುಮುರಿ, ಆಮ್ಲೆಟ್, ಸೋಡಾ, ಗಂಜಿ ಊಟ ಮಾರುತ್ತಾ ಬದುಕು ಸಾಗಿಸುತ್ತಿದ್ದರು. ಅಲ್ಲೇ ರೀಲ್ಸ್ ಮಾಡುತ್ತಿದ್ದರು. ಇದು ಸ್ಟಾರ್ ಆಗುವ ಕನಸು ಅಲ್ಲ, ಬದುಕನ್ನು ಹಗುರಾಗಿಸುವ ಪ್ರಯತ್ನ.

14 ವರ್ಷಗಳ ನಾಟಕ, ದೇವಿಯ ಪಾತ್ರಗಳು, ರಂಗಭೂಮಿಯ ಬೆಳಕಿನ ಸ್ಪರ್ಶ – ಇದರಲ್ಲಿ ಆಶಾಕ್ಕ ಪ್ರಭಾವಿಯರಲ್ಲಿ ಗುರುತಿಸಿಕೊಂಡಿದ್ದರು. ಆದರೆ ಬೆಳಕಿಗಿಂತ ದೊಡ್ಡದಾಗಿರಲಿಲ್ಲ ಅವರ ಅಹಂ. ಎಲ್ಲವನ್ನೂ ಬಿಟ್ಟು, ಸಣ್ಣ ಗುಡಂಗಡಿ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರು. ಆ ಗುಡಂಗಡಿಗೆ ನಿಜಕ್ಕೂ ಗಟ್ಟಿತನ ಇತ್ತು.
ಅವರು ಅಂಜಲಿಲ್ಲ, ಅಳುಕಲಿಲ್ಲ, ಯಾರ ಮುಂದೆಯೂ ಕೈ ಚಾಚಲಿಲ್ಲ. ಕೊನೆಗೆ ಅತ್ತದ್ದೂ ಇಲ್ಲ. ಕೊನೆಯವರೆಗೂ ರೀಲ್ಸ್ ಮಾಡುತ್ತಾ, ನಗುತ್ತಾ ಉಸಿರು ಚೆಲ್ಲಿದರು.

ಪ್ರಸಿದ್ಧಿ ಬಂತು, ಫಾಲೋವರ್ಸ್ ಹೆಚ್ಚಾದರು, ಪ್ರಮೋಷನ್‌ಗಳು ಕೈ ಹಿಡಿದವು. ಗುಡಂಗಡಿ ವಿಸ್ತಾರವಾಗುವ ಕನಸು ಮೂಡುತ್ತಿತ್ತು… ಆದರೆ ಹಠಾತ್, “ನಮ್ಮ ಆಶಾ ನಮ್ಮನ್ನು ಅಗಲಿದ್ದಾರೆ” ಎಂಬ ಪೋಸ್ಟ್ ಅಭಿಮಾನಿಗಳನ್ನು ದುಃಖದ ಕಡಲಲ್ಲಿ ಮುಳುಗಿಸಿತು.

ಇಂದು ರೀಲ್ಸ್ ಓಪನ್ ಮಾಡಿದರೆ, ಆಶಾಕ್ಕನ ನಗು ಎದುರಾಗುತ್ತದೆ. ಇಂದು ಕರಾವಳಿಯಲ್ಲಿ ಒಂದು ಧ್ವನಿ ಮೌನವಾಗಿದೆ. ಒಂದು ಬೈಗುಳ ನಿಂತಿದೆ. ಒಂದು ನಗು ಅಚಾನಕ್ ಮೌನವಾಗಿದೆ.
ಆದರೆ… ಆಶಾಕ್ಕನ ಮಾತುಗಳು ಇನ್ನೂ ಬದುಕುತ್ತಿವೆ. ಸ್ಟಾರ್‌ಗಳು ಬೆಳಕಿನಲ್ಲಿ ಮಿಂಚುತ್ತಾರೆ. ಆಶಾ ಪಂಡಿತ್ ಬದುಕಿನ ಕತ್ತಲಲ್ಲಿ ನಗು ಬೆಳಗಿಸಿದಳು. ಅದೇ ಅವಳಿಗೆ ಸಿಕ್ಕ ನಿಜವಾದ ಬಿರುದು.
ಆಶಾಕ್ಕನಿಗೆ ದೇವರು ಶಾಂತಿ ಕೊಡಲಿ.
ಅವರ ನೆನಪು… ಮತ್ತೆ ಮತ್ತೆ ನಮ್ಮನ್ನು ನಗಿಸಲಿ.
