ಮಂಗಳೂರಿನ ಮುಕುಟಕ್ಕೆ ʻಕಲಶʼದ ಗರಿ: ನವೀಕೃತ ಪಂಪ್‌ವೆಲ್ ಮಹಾವೀರ ವೃತ್ತ ಜ.24ಕ್ಕೆ ಲೋಕಾರ್ಪಣೆ

ಮಂಗಳೂರು: ನಗರದ ಪ್ರವೇಶದ ಹೆಬ್ಬಾಗಿಲಿನಂತಿರುವ ಪಂಪ್‌ವೆಲ್ ಮಹಾವೀರ ವೃತ್ತ ಇಂದು ಹೊಸ ಕಾಂತಿಯೊಂದಿಗೆ ಕಂಗೊಳಿಸುತ್ತಿದೆ. ಬರೋಬ್ಬರಿ 9 ವರ್ಷಗಳ ದೀರ್ಘ ನಿರೀಕ್ಷೆಗೆ ತೆರೆ ಎಳೆದಂತೆ, ವೃತ್ತವನ್ನು ಪುನರ್‌ನಿರ್ಮಾಣಗೊಳಿಸಿ ಸಾಂಸ್ಕೃತಿಕ ವೈಭವದೊಂದಿಗೆ ರೂಪುಗೊಳಿಸಲಾಗಿದೆ. ಬಹುನಿರೀಕ್ಷಿತ ನವೀಕೃತ ಮಹಾವೀರ ವೃತ್ತದ ಲೋಕಾರ್ಪಣೆ ಜ.24ರಂದು ನಡೆಯಲಿದೆ ಎಂದು ಮಂಗಳೂರು ಜೈನ್ ಸೊಸೈಟಿ ಅಧ್ಯಕ್ಷ ಪುಷ್ಪರಾಜ್ ಜೈನ್ ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಗಳೂರು ಜೈನ್ ಸೊಸೈಟಿ (ರಿ) ಅವರ ಮುಂದಾಳತ್ವದಲ್ಲಿ ಈ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದ್ದು, ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ವೃತ್ತವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಸಭಾಧ್ಯಕ್ಷ ಡಾ. ಯು.ಟಿ. ಖಾದರ್ ಅವರು ನಾಮಫಲಕ ಅನಾವರಣಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೂಡಾ ಮಾಜಿ ಅಧ್ಯಕ್ಷ ಕೆ. ಸುರೇಶ್ ಬಲ್ಲಾಳ್ ಹಾಗೂ ಸ್ಥಳೀಯ ಮಾಜಿ ಕಾರ್ಪೊರೇಟರ್ ಸಂದೀಪ್ ಗರೋಡಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ನಗರದ ಮುಕುಟದಂತಿರುವ ಮಹಾವೀರ ವೃತ್ತವು ಕರಾವಳಿಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಪ್ರಮುಖ ಗುರುತಾಗಿದೆ. ಪೂರ್ಣಕುಂಭದೊಂದಿಗೆ ಸ್ವಾಗತ ಕೋರುವಂತೆ ವಿನ್ಯಾಸಗೊಳಿಸಲಾದ ಬೃಹತ್ ಕಲಶ ಎಲ್ಲರ ಗಮನ ಸೆಳೆಯುವಂತಿದೆ. 2016ರಲ್ಲಿ ಪಂಪ್‌ವೆಲ್ ಮೇಲ್ವೇತುವೆ ಕಾಮಗಾರಿಯ ಹಿನ್ನೆಲೆಯಲ್ಲಿ ಸ್ಥಳಾಂತರಿಸಲ್ಪಟ್ಟಿದ್ದ ಈ ಕಲಶ ಇದೀಗ ವಿಶಿಷ್ಟ ವೈಭವದೊಂದಿಗೆ ಮರುನಿರ್ಮಾಣಗೊಂಡಿದೆ.

ಕೇರಳ, ಕಾಸರಗೋಡು, ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಧರ್ಮಸ್ಥಳ ಸೇರಿದಂತೆ ವಿವಿಧ ದಿಕ್ಕುಗಳಿಂದ ಮಂಗಳೂರು ಪ್ರವೇಶಿಸುವವರು ಅನಿವಾರ್ಯವಾಗಿ ದಾಟುವ ಈ ವೃತ್ತ, ನಗರಕ್ಕೆ ಕಾಲಿಟ್ಟ ಕ್ಷಣದಲ್ಲೇ ‘ಮಂಗಳೂರು ಬಂದಿದೆ’ ಎಂಬ ಭಾವನೆ ಮೂಡಿಸುವ ವಿಶಿಷ್ಟ ಗುರುತಾಗಿ ಬೆಳೆದಿದೆ. ಅದರ ಆಕರ್ಷಣೆಯೇ ಪ್ರವಾಸಿಗರನ್ನು ಕ್ಷಣಕಾಲ ನಿಲ್ಲಿಸಿ ನೋಡುವಂತೆ ಮಾಡುವಷ್ಟು ಮನಮೋಹಕವಾಗಿದೆ.

ಮಹಾವೀರ ವೃತ್ತದ ನವೀಕರಣಕ್ಕಾಗಿ ಮಂಗಳೂರು ಜೈನ್ ಸೊಸೈಟಿ ಹಾಗೂ ಜೈನ ಸಮುದಾಯದ ಸದಸ್ಯರು ಅವಿರತ ಶ್ರಮ ವಹಿಸಿದ್ದಾರೆ. ಮೇಲ್ವೇತುವೆ ಕಾಮಗಾರಿ ಪೂರ್ಣಗೊಂಡ ಬಳಿಕವೂ ವೃತ್ತ ನಿರ್ಮಾಣಕ್ಕೆ ಅನುಮತಿ ವಿಳಂಬವಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪಾಲಿಕೆಯನ್ನು ಸತತವಾಗಿ ಸಂಪರ್ಕಿಸಿ, ಮಾರ್ಗಸೂಚಿಗಳಂತೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ವೃತ್ತಕ್ಕೆ ಅಲಂಕಾರಿಕ ದೀಪಗಳು, ಗ್ರಾನೈಟ್ ಅಳವಡಿಕೆ ಹಾಗೂ ಸುತ್ತಲೂ ರೇಲಿಂಗ್ ವ್ಯವಸ್ಥೆ ಮಾಡಲಾಗಿದೆ.

ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಈ ಬೃಹತ್ ಕಲಶ ಹಾಗೂ ವೃತ್ತವನ್ನು ನಿರ್ಮಿಸಲಾಗಿದೆ. ಅಭಿವೃದ್ಧಿ ಕಾರ್ಯ ಅಂತಿಮ ಹಂತ ತಲುಪಿದ್ದು, ಇಂದು ಮಹಾವೀರ ವೃತ್ತ ಮಂಗಳೂರಿನ ಹೆಮ್ಮೆಯ ಸಾಂಸ್ಕೃತಿಕ ಸಂಕೇತವಾಗಿ ಎಲ್ಲರ ಕಣ್ಮನ ಸೆಳೆಯುವಂತೆ ವೈಭವದಿಂದ ನಿಂತಿದೆ.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಸಚಿನ್ ಕುಮಾರ್ ಜೈನ್, ಕೋಶಾಧಿಕಾರಿ ಕೆ. ವಿಜೇಶ್ ವಿದ್ಯಾಧರ್, ವೃತ್ತದ ಆರ್ಕಿಟೆಕ್ಟ್ ರಾಜ್ ಶೇಖರ್ ಬಲ್ಲಾಳ್ ಹಾಗೂ ಮಾಜಿ ಕಾರ್ಪೊರೇಟರ್ ಪ್ರಭಾಮಾಲಿನಿ ಜೈನ್ ಉಪಸ್ಥಿತರಿದ್ದರು.

error: Content is protected !!