ಮಂಗಳೂರು ಕನ್ನಡ ಸಾಹಿತ್ಯ ಪರಿಷತ್‌ಗೆ ಅರ್ಧ ಎಕರೆ ಜಾಗ ಮಂಜೂರು – ಕನ್ನಡ ಭವನ ನಿರ್ಮಾಣಕ್ಕೆ ಐತಿಹಾಸಿಕ ಹೆಜ್ಜೆ

ಮಂಗಳೂರು: 2026ರ ಹೊಸ ವರ್ಷದ ಶುಭಾರಂಭದ ಸಂದರ್ಭದಲ್ಲಿ, ಉಡುಪಿ ಪರ್ಯಾಯದ ಪರ್ವಕಾಲ, ಡಾ. ಮಂಜುನಾಥ ಎಸ್. ರೇವಣಕರ್ ಅವರ ಷಷ್ಟ್ಯಬ್ದಿ ಸಂಭ್ರಮದ ಶುಭ ಘಳಿಗೆ, ಧರ್ಮಸ್ಥಳದ ಕದ್ರಿಯ ರಥೋತ್ಸವ, ಮಂಗಳೂರು ರಥೋತ್ಸವ ಹಾಗೂ ಕರ್ಕಿ ದೈವಜ್ಞ ಬ್ರಾಹ್ಮಣ ಮಠದ ರಜತ ರಥೋತ್ಸವದ ಶುಭ ಸಂದರ್ಭದಲ್ಲಿ, ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ತಿನ 110 ವರ್ಷಗಳ ಇತಿಹಾಸದಲ್ಲೇ ಅಪೂರ್ವ ಸಾಧನೆಯೊಂದಾಗಿ ಮಂಗಳೂರು ತಾಲ್ಲೂಕು ಘಟಕಕ್ಕೆ ಸರ್ಕಾರದಿಂದ ಅರ್ಧ ಎಕರೆ ಜಾಗ ಮಂಜೂರಾಗಿದೆ ಎಂದು ಕಸಾಪ ತಿಳಿಸಿದೆ.

ಮಂಗಳೂರು ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣಕರ್ ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಾಜೇಶ್ ಅವರ ವಿನಂತಿ ಪತ್ರದ ಆಧಾರದ ಮೇಲೆ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕಕ್ಕೆ ಈ ಐತಿಹಾಸಿಕ ಕೊಡುಗೆ ಲಭಿಸಿದೆ. ಇಡೀ ಕನ್ನಡಿಗರ ಪರವಾಗಿ ಕರ್ನಾಟಕ ಸರ್ಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಮಂಗಳೂರು ತಾಲೂಕಿನ ಗುರುಪುರ ಹೋಬಳಿಯ ವಾಮಂಜೂರು ಸಮೀಪದ ತಿರುವೈಲು ಗ್ರಾಮದ ಸರ್ವೇ ನಂ. 61/3ರಲ್ಲಿ 50 ಸೆಂಟ್ಸ್ (ಅರ್ಧ ಎಕರೆ) ಜಾಗವನ್ನು ಕನ್ನಡ ಭವನ ನಿರ್ಮಾಣಕ್ಕಾಗಿ ಸರ್ಕಾರ ಮಂಜೂರು ಮಾಡಿದ್ದು, ಈ ಸಂಬಂಧ ಅಧಿಕೃತ ಆದೇಶ ಪತ್ರವೂ ಜಾರಿಯಾಗಿದೆ. ಈ ಜಾಗದಲ್ಲಿ ಶೀಘ್ರದಲ್ಲೇ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ‘ಕನ್ನಡ ಭವನ’ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯಕಾರಿ ಸಮಿತಿ ಹಾಗೂ ತಾಲ್ಲೂಕು ಘಟಕದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಸಹಕಾರದಿಂದ ಈ ಮಹತ್ವದ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದರು.

ಧರ್ಮದರ್ಶಿ ಹರಿಕೃಷ್ಣ ಪುನುರೂರು ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಮಂಜುನಾಥ ಎಸ್. ರೇವಣಕರ್ ಅವರ ನಿರಂತರ ಪರಿಶ್ರಮ, ಮುಂದಾಳತ್ವ ಮತ್ತು ಸರ್ಕಾರದ ಮಟ್ಟದಲ್ಲಿ ನಡೆಸಿದ ಸತತ ಪ್ರಯತ್ನಗಳ ಫಲವಾಗಿ ಈ ಜಾಗ ಮಂಜೂರಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ RUPSA ಹಾಗೂ KUPMA ಸಂಸ್ಥೆಗಳ ಉಪಾಧ್ಯಕ್ಷರಾಗಿಯೂ, ಮುಡಿಪು ಸೂರಜ್ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ. ತಾಲ್ಲೂಕು ಮಟ್ಟದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ಭವನವೊಂದರ ಅಗತ್ಯತೆಯನ್ನು ಮನಗಂಡು ಅವರು ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿದ್ದರು ಎಂದು ತಿಳಿಸಿದರು.

ಈ ಕನ್ನಡ ಭವನವು ಮುಂದಿನ ದಿನಗಳಲ್ಲಿ ಕರಾವಳಿ ಭಾಗದ ಕನ್ನಡ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಉಜಿರೆ,  ಕಸಾಪ ಮಂಗಳೂರು ತಾಲೂಕು ಘಟಕದ ಗೌರವ ಕಾರ್ಯದರ್ಶಿಗಳಾದ ಡಾ. ಮುರಳಿ ಮೋಹನ್ ಚೂಂತಾರು ಹಾಗೂ ಗಣೇಶ್ ಪ್ರಸಾದ್ ಜಿ., ಕಾರ್ಯದರ್ಶಿ ಸುಭ್ರಾಯ ಭಟ್ ಮತ್ತು ತಾಲ್ಲೂಕು ಘಟಕದ ಅಧ್ಯಕ್ಷೆ ಮೀನಾಕ್ಷಿ ಉಪಸ್ಥಿತರಿದ್ದರು.

error: Content is protected !!