ಮಂಗಳೂರು: ಹಿಂದೂ ಸಮಾಜದ ಏಕತೆ ಬಂಧುಗಳ ಏಕತೆ, ಸಂಸ್ಕೃತಿ ಹಾಗೂ ಧಾರ್ಮಿಕ ನಂಬಿಕೆಯನ್ನು ಬಲಪಡಿಸುವ ಮಹತ್ತರ ಉದ್ದೇಶದಿಂದ ಮಂಗಳೂರು ತಾಲೂಕಿನ ಎಡಪದವು, ಮಳಲಿ, ಗುರುಪುರ, ಪೆರ್ಮಂಕಿ, ಕೆಂಜಾರು, ಬಜಪೆ, ಎಕ್ಕಾರು ಮಂಡಲಗಳಲ್ಲಿ ‘ಹಿಂದೂ ಸಂಗಮ’ ಆಯೋಜಿಸಲಾಗಿದ್ದು, ಈ ಮೂಲಕ ಸಮಸ್ತ ಹಿಂದೂ ಸಮಾಜವನ್ನು ಸಂಘಟಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ಹಿಂದು ಸಂಗಮ ಆಯೋಜನ ಸಮಿತಿ ಗುರುಪುರ ಕೈಕಂಬ, ಕಿನ್ನಿಕಂಬಳ ಇದರ ಗೌರವಾಧ್ಯಕ್ಷ ವಜ್ರದೇಹಿ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.

ಮಂಗಳೂರಿನ ಕದ್ರಿಯಲ್ಲಿರುವ ವಿಶ್ವಹಿಂದೂ ಪರಿಷತ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಅವಿನಾಶಿ ಸನಾತನ ಸಂಸ್ಕೃತಿಯ ಅಂತಃಸತ್ವವನ್ನು ಸಮಾಜದ ಮುಂದೆ ಅನಾವರಣಗೊಳಿಸುವ ಮೂಲಕ ಅದರ ಮೌಲ್ಯಗಳು, ಧಾರ್ಮಿಕ ಆಸ್ಥೆಗಳು ಹಾಗೂ ಸಾಮಾಜಿಕ ಸಾಮರಸ್ಯವನ್ನು ಉದ್ದೀಪನಗೊಳಿಸಿ, ಸಮಸ್ತ ಹಿಂದೂ ಸಮಾಜವನ್ನು ಸಂಘಟಿಸುವ ದಿಶೆಯಲ್ಲಿ ಈ ಪ್ರಯತ್ನ ಸಾಗುತ್ತಿದೆ. ಇದರೊಂದಿಗೆ ಸಾಮರಸ್ಯ, ಕುಟುಂಬ ಪದ್ಧತಿ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ ಮತ್ತು ನಾಗರಿಕ ಕರ್ತವ್ಯ ಎಂಬ ಪಂಚ ಪರಿವರ್ತನೆಗಳನ್ನು ಆಚರಣೆಯ ಮೂಲಕ ಅಳವಡಿಸಿಕೊಂಡು, ವ್ಯಕ್ತಿಯಿಂದ ಸಮಾಜದವರೆಗೆ ಸಕಾರಾತ್ಮಕ ಪರಿವರ್ತನೆಯನ್ನು ರೂಪಿಸುವ ವೇದಿಕೆಯಾಗಿಯೂ ಈ ಕಾರ್ಯಕ್ರಮ ಕಾರ್ಯನಿರ್ವಹಿಸುತ್ತದೆ. ಈ ಆಶಯದೊಂದಿಗೆ ಗುರುಪುರ ತಾಲೂಕಿನ ವಿವಿಧ ಮಂಡಲಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಉಡುಪಿ ಪರ್ಯಾಯ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಭಗವಾಧ್ವಜ ಹಾರಿಸಿರುವ ವಿಚಾರ ವಿವಾದ ಸೃಷ್ಟಿಸಿರುವುದು ಸರಿಯಲ್ಲ. ಇಲ್ಲಿನ ಕೆಲ ನಾಯಕರಿಗೆ ಧರ್ಮದ ಅರ್ಥ, ಸಾಪೇಕ್ಷತೆ ಹಾಗೂ ನಿರಪೇಕ್ಷತೆಯ ಕುರಿತು ಸ್ಪಷ್ಟ ಅರಿವು ಇಲ್ಲದಿರುವುದು ವಿಷಾದಕರ. ಭಗವಾಧ್ವಜ ಎನ್ನುವುದು ಧರ್ಮದಂಡ. ಜಿಲ್ಲಾಧಿಕಾರಿಗಳು ಸರ್ಕಾರದ ಭಾಗವಾಗಿರಬಹುದು; ಆದರೆ ಅವರ ವೈಯಕ್ತಿಕ ಧಾರ್ಮಿಕ ವಿಚಾರಗಳಲ್ಲಿ ನಿರ್ಬಂಧ ಹೇರುವುದು ಸರಿಯಲ್ಲ ಎಂದರು.

ನಮ್ಮ ಧಾರ್ಮಿಕ ವ್ಯವಸ್ಥೆಯಲ್ಲಿ ಅನ್ಯಮತೀಯರನ್ನು ನೇಮಕ ಮಾಡುವಾಗಲೂ ಸಮರ್ಥನೆ ನೀಡುವವರೇ ಇಂದು ಇಂತಹ ವಿಚಾರಗಳನ್ನು ಪ್ರಶ್ನಿಸುತ್ತಿರುವುದು ಅಸಂಗತ. ಹಿಂದಿನ ದಿನಗಳಲ್ಲಿ ಅನ್ಯಮತೀಯ ಜಿಲ್ಲಾಧಿಕಾರಿಗಳು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭಗಳೂ ಇವೆ. ಆಗ ಅವರನ್ನು ಯಾರೂ ತಡೆಯಲಿಲ್ಲ. ಹಾಗಾದರೆ ಇಂದು ಡಿಸಿ ಹುದ್ದೆಗೆ ಕಪ್ಪುಚುಕ್ಕೆ ಹಾಕುವ ಅಗತ್ಯ ಏನು? ಎಲ್ಲಿಯೂ ಸಮಸ್ಯೆಗಳಿಲ್ಲದ ಸಂದರ್ಭದಲ್ಲಿ ಸಮಸ್ಯೆ ಸೃಷ್ಟಿಸುವ ಹುನ್ನಾರ ಮಾತ್ರ ನಡೆಯುತ್ತಿದೆ. ಹಿಂದಿನ ಕಮಿಷನರ್‌ಗಳು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನೃತ್ಯಕ್ಕೆ ಹೆಜ್ಜೆ ಹಾಕಿದ ಉದಾಹರಣೆಗಳಿವೆ. ಅಲ್ಲಿ ಜಾತಿ–ಧರ್ಮದ ಪ್ರಶ್ನೆ ಉದ್ಭವಿಸಲಿಲ್ಲ. ಹಾಗಾಗಿ ಇಲ್ಲಿ ಜಾತಿ ಧರ್ಮ ತರ್ಬಾರ್ದು ಎಂದು ವಜ್ರದೇಹಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ನಾರ್ಲ, ಸಂಯೋಜಕ ಕೃಷ್ಣ ಕೊಂಪದವು, ಕಾರ್ಯದರ್ಶಿ ಕೃಷ್ಣ ಕಜೆಪದವು, ಉಪಾಧ್ಯಕ್ಷ ರಾಜೀವ ಶೆಟ್ಟಿ ಪೆರ್ಮಂಕಿ ಹಾಗೂ ಮಹಿಳಾ ಪ್ರಮುಖ್ ಗೀತಾ ಲಕ್ಷ್ಮಿ ಬಜಪೆ ಉಪಸ್ಥಿತರಿದ್ದರು.

ಮಂಡಲವಾರು ಕಾರ್ಯಕ್ರಮ ವಿವರಗಳು
ಎಡಪದವು ಮಂಡಲ (ಕೊಂಪದವು, ಮುಚೂರು, ಎಡಪದವು, ಬಡಗ ಎಡಪದವು):
- ದಿನಾಂಕ: 25-02-2026 (ಭಾನುವಾರ)
- ಸ್ಥಳ: ಸ್ವಾಮಿ ವಿವೇಕಾನಂದ ವಿದ್ಯಾಲಯ ಪ್ರಾಂಗಣ
- ಶೋಭಾಯಾತ್ರೆ: ಶ್ರೀ ರಾಮ ಮಂದಿರ, ಎಡಪದವು — ಮಧ್ಯಾಹ್ನ 2.30ಕ್ಕೆ ಪ್ರಾರಂಭ
ಮಳಲಿ ಮಂಡಲ (ಬಡಗುಳಿವಾಡಿ, ತೆಂಕುಳಿಪಾಡಿ, ಮೊಗರು, ಕಿಲೆಂಜಾರು, ಕುಳವೂರು, ಮುತ್ತೂರು):
- ದಿನಾಂಕ: 01-02-2026 (ಭಾನುವಾರ)
- ಸ್ಥಳ: ನಾರ್ಲಪದವು, ಆಳ್ವಾಸ್ ಮೈದಾನ
- ಶೋಭಾಯಾತ್ರೆ: ಶ್ರೀ ಮಹಾಗಣಪತಿ ದೇವಸ್ಥಾನ ವಠಾರ, ಗಂಜಿಮಠ — ಮಧ್ಯಾಹ್ನ 2.30ಕ್ಕೆ ಪ್ರಾರಂಭ
ಗುರುಪುರ ಮಂಡಲ (ಮುಳೂರು, ಅಡ್ಡೂರು, ಕಂದಾವರ, ಕೊಳಂಬೆ, ಅದ್ಯಪಾಡಿ):
- ದಿನಾಂಕ: 01-02-2026 (ಭಾನುವಾರ)
- ಸ್ಥಳ: ಶ್ರೀ ವೈದ್ಯನಾಥ ಸಭಾಭವನದ ಬಳಿ, ಕುಕ್ಕುದಕಟ್ಟೆ – ಗುರುಪುರ
- ಶೋಭಾಯಾತ್ರೆ: ಗುರುಪುರ ಜಂಗಮ ಮಠ — ಮಧ್ಯಾಹ್ನ 2.30ಕ್ಕೆ ಪ್ರಾರಂಭ
ಪೆರ್ಮಂಕಿ ಮಂಡಲ (ನೀರು ಮಾರ್ಗ, ಬೊಂಡಂತಿಲ, ಉಳಾಯಿಬೆಟ್ಟು, ಮಲ್ಲೂರು):
- ದಿನಾಂಕ: 25-01-2026 (ಭಾನುವಾರ)
- ಸ್ಥಳ: ಶ್ರೀ ಅರಸು ಮುಂಡತ್ತಾಯ ದೈವಸ್ಥಾನದ ಬಳಿ
- ಶೋಭಾಯಾತ್ರೆ: ವಿಶ್ವೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ವಠಾರ — ಮಧ್ಯಾಹ್ನ 2.30ಕ್ಕೆ ಪ್ರಾರಂಭ
ಎಕ್ಕಾರು ಮಂಡಲ (ಬಡಗ ಎಕ್ಕಾರು, ತೆಂಕ ಎಕ್ಕಾರು, ಪೆರ್ಮುದೆ):
- ದಿನಾಂಕ: 01-02-2026 (ಭಾನುವಾರ)
- ಸ್ಥಳ: ಬಂಟರ ಭವನ, ಎಕ್ಕಾರು
ಕೆಂಜಾರು ಮಂಡಲ (ಕೆಂಜಾರು, ಮರವೂರು, 63ನೇ ತೋಕೂರು, ಜೋಕಟ್ಟೆ):
- ದಿನಾಂಕ: 01-02-2026 (ಭಾನುವಾರ)
- ಸ್ಥಳ: ಪಾಪ್ಯುಲರ್ ಫಾರ್ಮ್, ಮರವೂರು
- ಶೋಭಾಯಾತ್ರೆ: ಶ್ರೀ ದೇವಿ ಭಜನಾ ಮಂದಿರ, ಕೆಂಜಾರು – ಕರಂಬಾರು — ಮಧ್ಯಾಹ್ನ 2.30ಕ್ಕೆ ಪ್ರಾರಂಭ
ಬಜಪೆ ಮಂಡಲ (ಬಜಪೆ, ಮೂಡುಪೆರಾರ, ಪಡುಪೆರಾರ):
- ದಿನಾಂಕ: 01-02-2026 (ಭಾನುವಾರ)
- ಸ್ಥಳ: ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ ವಠಾರ
- ಶೋಭಾಯಾತ್ರೆ: ಬಜಪೆ ಶಕ್ತಿ ಮಂಟಪ — ಮಧ್ಯಾಹ್ನ 2.30ಕ್ಕೆ ಪ್ರಾರಂಭ