ಈಶ್ವರ ಮಲ್ಪೆಗೆ ಪ್ರಥಮ ಲಯನ್ಸ್ ಅಶೋಕ ಸೇವಾ ರತ್ನ ಪ್ರಶಸ್ತಿ

ಮಂಗಳೂರು: ಲಯನ್ಸ್ ಕ್ಲಬ್ ಅಶೋಕನಗರ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಲಯನ್ಸ್ ಕ್ಲಬ್ ಮಂಗಳೂರು ಅಶೋಕನಗರದ ಸಹಯೋಗದೊಂದಿಗೆ ಸಮಾಜಸೇವೆಯ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸುವ ಉದ್ದೇಶದಿಂದ ಪ್ರತಿವರ್ಷ ನೀಡಲಾಗುವ ʻಲಯನ್ಸ್ ಅಶೋಕ ಸೇವಾ ರತ್ನ ಪ್ರಶಸ್ತಿʼಯನ್ನು ಈ ವರ್ಷ ಪ್ರಥಮ ಬಾರಿಗೆ ಘೋಷಿಸಲಾಗಿದೆ. ಈ ಪ್ರತಿಷ್ಠಿತ ಮೊದಲ ಪ್ರಶಸ್ತಿಯನ್ನು ಖ್ಯಾತ ಸಮಾಜಸೇವಕ ಹಾಗೂ ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿಯೊಂದಿಗೆ ರೂ.25,000 ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು ಎಂದು ಚೇರ್‌ಮನ್ ನವೀನ್ ಶೆಟ್ಟಿ ಕೆ. ತಿಳಿಸಿದರು.


ಅವರು ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಶಸ್ತಿ ಪ್ರದಾನ ಸಮಾರಂಭವು ಜನವರಿ 26, 2026ರಂದು ಲಯನ್ಸ್ ಕ್ಲಬ್ ಮಂಗಳೂರು ಅಶೋಕನಗರದ ಲಯನ್ಸ್ ಅಶೋಕ ಸೇವಾ ಭವನದಲ್ಲಿ, ಜಿಲ್ಲಾ ಗವರ್ನರ್‌ರ ಅಧಿಕೃತ ಭೇಟಿ (District Governor’s Official Visit) ಕಾರ್ಯಕ್ರಮದ ಅಂಗವಾಗಿ ನಡೆಯಲಿದೆ. ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರ್ ಲಯನ್ ಕುಡ್ಲಿ ಅರವಿಂದ್ ಶೆಣೈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ ಎಂದರು.

ಶಿಕ್ಷಣ, ಆರೋಗ್ಯ, ಮಾನವೀಯ ಸೇವೆ ಹಾಗೂ ಸಮಾಜದ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಲಯನ್ಸ್ ಕ್ಲಬ್ ಅಶೋಕನಗರ ಚಾರಿಟೇಬಲ್ ಟ್ರಸ್ಟ್, ಈಶ್ವರ ಮಲ್ಪೆ ಅವರ ನಿಸ್ವಾರ್ಥ ಹಾಗೂ ಸಮಾಜಮುಖಿ ಸೇವೆಯನ್ನು ಗುರುತಿಸಿ ಈ ಗೌರವವನ್ನು ನೀಡುತ್ತಿದೆ. ಮುಂದಿನ ವರ್ಷಗಳಿಂದಲೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಪ್ರತಿವರ್ಷ ಈ ಪ್ರಶಸ್ತಿಯನ್ನು ನೀಡುವ ಮೂಲಕ ಸೇವಾ ಮನೋಭಾವವನ್ನು ಉತ್ತೇಜಿಸುವ ಸಂಕಲ್ಪವನ್ನು ಟ್ರಸ್ಟ್ ಹೊಂದಿದೆ ಎಂದು ನವೀನ್‌ ಶೆಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಅಶೋಕನಗರದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ವಸಂತ ಶೆಟ್ಟಿ ಬಿ., ಚರಣ್ ಆಳ್ವ, ನಾರಾಯಣ ಎಂ., ನರೇಶ್ ಶೆಟ್ಟಿ, ನಿಖಿಲ್ ಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!