ಯುವಜನತೆಗೆ ಪುರಾಣದ ಸಾರ ತಲುಪಿಸುವುದೇ ʻರಂಗಸ್ಥಳ’ದ ಗುರಿ: ಮಾ. 14ಕ್ಕೆ ಕದ್ರಿಯಲ್ಲಿ ʻಪ್ರಚಂಡ ಲಂಕೇಶ್ವರ’ ಯಕ್ಷ ವೈಭವ

ಮಂಗಳೂರು: “ನಮ್ಮ ಪುರಾಣಗಳಾದ ರಾಮಾಯಣ, ಮಹಾಭಾರತಗಳ ಜೀವನ ಸಂದೇಶವನ್ನು ಇಂದಿನ ಯುವ ಪೀಳಿಗೆಗೆ ದಾಟಿಸಲು ಯಕ್ಷಗಾನಕ್ಕಿಂತ ಪ್ರಬಲ ಮಾಧ್ಯಮ ಬೇರೊಂದಿಲ್ಲ. ಇದೇ ಉದ್ದೇಶದೊಂದಿಗೆ ಹನ್ನೊಂದು ವರ್ಷಗಳ ಹಿಂದೆ ಆರಂಭವಾದ ‘ರಂಗಸ್ಥಳ ಮಂಗಳೂರು’ ಸಂಸ್ಥೆಯು ಇಂದು ಸಾಂಸ್ಕೃತಿಕ ರಂಗದಲ್ಲಿ ಹೆಮ್ಮರವಾಗಿ ಬೆಳೆದಿದೆ,” ಎಂದು ಸಂಸ್ಥೆಯ ಅಧ್ಯಕ್ಷರಾದ ದಿನೇಶ್ ಪೈ ಅವರು ತಿಳಿಸಿದರು.

ನಗರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 11 ವರ್ಷಗಳ ಹಿಂದೆ ಆರು ಜನ ಸಮಾನ ಮನಸ್ಕರ ಕೂಡುವಿಕೆಯಿಂದ ಪುರಭವನದಲ್ಲಿ ಆರಂಭವಾದ ಈ ಸಂಸ್ಥೆ, ಹತ್ತು ವರ್ಷಗಳ ಹಿಂದೆ ಅಧಿಕೃತವಾಗಿ ನೋಂದಾಯಿಸಲ್ಪಟ್ಟಿತು. ಮಂಗಳೂರು ಮಾತ್ರವಲ್ಲದೆ ಮೂಡುಬಿದಿರೆ, ಬ್ರಹ್ಮಾವರ, ಶಾಸ್ತಾನ ಸೇರಿದಂತೆ ವಿವಿಧೆಡೆ 20ಕ್ಕೂ ಹೆಚ್ಚು ಅದ್ದೂರಿ ಆಟ-ಕೂಟಗಳನ್ನು ಯಶಸ್ವಿಯಾಗಿ ಸಂಘಟಿಸಿದ ಹೆಮ್ಮೆ ಸಂಸ್ಥೆಗಿದೆ. ತೆಂಕಣ ನೆಲದಲ್ಲೂ ಬಡಗು ತಿಟ್ಟಿನ ಆಟ ಹಾಗೂ ತೆಂಕು-ಬಡಗು ಸಮನ್ವಯದ ಕೂಟಗಳನ್ನು ಏರ್ಪಡಿಸುವ ಮೂಲಕ ಯಕ್ಷಗಾನದ ವಿಸ್ತಾರವನ್ನು ಹೆಚ್ಚಿಸಿದೆ. ಪ್ರತಿ ವರ್ಷ ಇಬ್ಬರು ಹಿರಿಯ ಕಲಾವಿದರನ್ನು ಸನ್ಮಾನಿಸುವ ಹಾಗೂ ಮೇಳದ ಎಲ್ಲಾ ಕಲಾವಿದರಿಗೆ ಪ್ರೋತ್ಸಾಹಧನ ನೀಡುವ ಸಂಪ್ರದಾಯವನ್ನು ಸಂಸ್ಥೆ ಪಾಲಿಸಿಕೊಂಡು ಬರುತ್ತಿದೆ ಎಂದರು.

ಮಾ. 14ರಂದು ವಿಶೇಷ ಯಕ್ಷಗಾನ:
ಸಂಸ್ಥೆಯ 11ನೇ ವರ್ಷದ ಸಂಭ್ರಮದ ಅಂಗವಾಗಿ ಮಾರ್ಚ್ 14, ಶನಿವಾರ ಸಂಜೆ 7 ಗಂಟೆಗೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ರಾಜಾಂಗಣದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಸುಪ್ರಸಿದ್ಧ ಪೆರ್ಡೂರು ಮೇಳದ ಕಲಾವಿದರಿಂದ ರಾವಣನ ಸಮಗ್ರ ಜೀವನಗಾಥೆಯನ್ನು ಬಿಂಬಿಸುವ ‘ಪ್ರಚಂಡ ಲಂಕೇಶ್ವರ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ರಾವಣನ ಜನನದಿಂದ ವಧೆಯವರೆಗೆ ಸಾಗುವ ಈ ಆಖ್ಯಾನವು ನೋಡುಗರಿಗೆ ಅದ್ಭುತ ಅನುಭವ ನೀಡಲಿದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದಿನೇಶ್ ಪೈ ಮನವಿ ಮಾಡಿದರು.

error: Content is protected !!