
ಇಂದೋರ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದ ವೇಳೆ ಟೀಮ್ ಇಂಡಿಯಾ ತಂಗಿದ್ದ ಹೋಟೆಲ್‌ನಲ್ಲಿ ಅಪರಿಚಿತ ಮಹಿಳೆಯೊಬ್ಬಳು ರೋಹಿತ್ ಶರ್ಮಾ ಅವರ ಬಳಿ ಬಂದು ತನ್ನ ಮಗುವಿನ ಪ್ರಾಣ ಉಳಿಸಲು ಕೈ ಹಿಡಿದು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾಳೆ.


ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕಾಗಿ ಇಂದೋರ್‌ಗೆ ಆಗಮಿಸಿದ್ದ ಭಾರತ ತಂಡವು ಹೋಟೆಲ್‌ಗೆ ಮರಳುತ್ತಿತ್ತು. ಈ ವೇಳೆ ಬಿಗಿ ಭದ್ರತೆಯನ್ನು ಮೀರಿ ಬಂದ ಸರಿತಾ ಶರ್ಮಾ ಎಂಬ ಮಹಿಳೆ, ರೋಹಿತ್ ಶರ್ಮಾ ಅವರ ಕೈಯನ್ನು ಬಲವಾಗಿ ಹಿಡಿದು ನನಗೆ ಸಹಾಯ ಮಾಡಿ ಎಂದು ಕೂಗಾಡಿದರು. ಇದರಿಂದ ದಿಕ್ಕೇ ತೋಚದಂತಾದ ರೋಹಿತ್ ಶರ್ಮಾ ತಕ್ಷಣವೇ ಸ್ತಬ್ಧರಾದರು. ಕೂಡಲೇ ಭದ್ರತಾ ಸಿಬ್ಬಂದಿ ಮಹಿಳೆಯನ್ನು ಪಕ್ಕಕ್ಕೆ ಕರೆದೊಯ್ದರು.

ನಂತರದ ವಿಡಿಯೋದಲ್ಲಿ ತನ್ನ ಅಳಲನ್ನು ತೋಡಿಕೊಂಡ ಮಹಿಳೆ, ನನ್ನ ಮಗಳಾದ ಅನಿಕಾ ಗಂಭೀರ ಕಾಯಿಲೆ(SMA Type-2)ಯಿಂದ ಬಳಲುತ್ತಿದ್ದಾಳೆ. ಆಕೆಯನ್ನು ಉಳಿಸಲು ಅಮೆರಿಕದಿಂದ 9 ಕೋಟಿ ರೂಪಾಯಿ ಬೆಲೆಯ ಇಂಜೆಕ್ಷನ್ ತರಿಸಬೇಕು. ಈಗಾಗಲೇ ಜನರಿಂದ 4.1 ಕೋಟಿ ರೂಪಾಯಿ ಸಂಗ್ರಹಿಸಿದ್ದೇವೆ, ಆದರೆ ಸಮಯ ಮೀರುತ್ತಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಮಕ್ಕಳಿಗೆ ಸಹಾಯ ಮಾಡುತ್ತಾರೆ ಎಂದು ಕೇಳಿದ್ದೆ, ಅದಕ್ಕಾಗಿಯೇ ಭಾವುಕಳಾಗಿ ಈ ರೀತಿ ಮಾಡಿದೆ ಎಂದು ಕಣ್ಣೀರಿಟ್ಟಿದ್ದಾರೆ.