ಉಡುಪಿ: ಒಂದು ಕ್ಷಣದ ಕೋಪ, ಒಂದು ಮಾತಿನ ಕಠೋರತೆ… ಅದೇ ಕ್ಷಣದಲ್ಲಿ ಒಬ್ಬ ತಾಯಿ-ಮಗಳ ನಡುವೆ ನಡೆದ ಸಣ್ಣ ಸಂಗತಿ, ಆದರೆ ಅದರ ಅಂತ್ಯ ಮಾತ್ರ ಯಾರೂ ಊಹಿಸದಷ್ಟು ಭೀಕರ.

ನಗರದ ಹೊರವಲಯದ ಬೀಡಿನಗುಡ್ಡೆ ಪ್ರದೇಶದಲ್ಲಿ ತಾಯಿ ಬೈದ ಹಿನ್ನೆಲೆಯಲ್ಲಿ ಮನನೊಂದ 15 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೃದಯವಿದ್ರಾವಕವಾಗಿ ಬೆಳಕಿಗೆ ಬಂದಿದೆ.
ಮೃತ ಬಾಲಕಿಯನ್ನು ಉತ್ತರ ಕರ್ನಾಟಕ ಮೂಲದ ಬೀಡಿನಗುಡ್ಡೆ ನಿವಾಸಿ ಗಂಗಮ್ಮ ಅವರ ಪುತ್ರಿ ಭರ್ಮವ್ವ (15) ಎಂದು ಗುರುತಿಸಲಾಗಿದೆ. ತನ್ನ ಕಾಲಿನ ಗೆಜ್ಜೆ ಕಳೆದುಹೋಗಿರುವ ವಿಷಯವನ್ನು ಬಾಲಕಿ ತಾಯಿಗೆ ಫೋನ್‌ನಲ್ಲಿ ತಿಳಿಸಿದ್ದಾಳೆ. ಆ ಕ್ಷಣದಲ್ಲಿ ಬಂದ ಬೈಗುಳ, ಮಗಳ ಮನಸ್ಸಿಗೆ ಗಾಢವಾಗಿ ತಟ್ಟಿದೆ ಎನ್ನಲಾಗಿದೆ. ಅಷ್ಟರಲ್ಲಿ ಯಾರಿಗೂ ಹೇಳಲಾಗದ ನೋವು ಆಕೆಯ ಒಳಗೊಳಗೆ ಬೆಳೆದು, ಮನೆಯೊಳಗೇ ನೇಣು ಬಿಗಿದುಕೊಳ್ಳುವಂತೆ ಮಾಡಿದೆ.

ಸಣ್ಣ ಸಂಗತಿಗೂ ಮಕ್ಕಳ ಮನಸ್ಸು ಎಷ್ಟು ಸೂಕ್ಷ್ಮವೋ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ. ಮಾಹಿತಿ ಪಡೆದ ಉಡುಪಿ ನಗರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.