ಮಂಗಳೂರು: ಮಂಗಳೂರು ನಗರದ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಹಸಿ ಸುಳ್ಳುಗಳನ್ನು ಹೇಳುತ್ತಾ, ಕೇಂದ್ರದ ಯೋಜನೆಗಳಿಗೆ ತನ್ನದೇ ‘ಲೇಬಲ್’ ಹಚ್ಚಿ ಜನರ ಹಾದಿ ತಪ್ಪಿಸುತ್ತಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಕಿಡಿಕಾರಿದ್ದಾರೆ.

ಮಂಗಳೂರಿನ ಅಟಲ್ ಸೇವಾ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಪಚ್ಚನಾಡಿ ಎಸ್.ಟಿ.ಪಿ ಆವರಣದ ಒಳಚರಂಡಿ ಕಾಮಗಾರಿಗೆ ಬಳಸಲಾಗುತ್ತಿರುವ 40 ಕೋಟಿ ರೂಪಾಯಿ ಪಕ್ಕಾ ಕೇಂದ್ರ ಸರ್ಕಾರದ ಅನುದಾನವಾಗಿದೆ. ರಾಜ್ಯ ಸರ್ಕಾರವು ಕಳೆದ ಎರಡು ವರ್ಷಗಳಿಂದ ನಯಾಪೈಸೆ ನೀಡದೆ ಕುಂಭಕರ್ಣ ನಿದ್ರೆಯಲ್ಲಿದೆ. ಈಗ ಕೇಂದ್ರದ ಹಣದಲ್ಲಿ ಗುದ್ದಲಿ ಪೂಜೆ ಮಾಡಿ ತನ್ನ ಬದ್ಧತೆ ಎಂದು ಜಂಬ ಕೊಚ್ಚಿಕೊಳ್ಳುತ್ತಿರುವುದು ಮಂಗಳೂರಿನ ಜನತೆಗೆ ಮಾಡುವ ಅವಮಾನ ಎಂದು ಶಾಸಕರು ಟೀಕಿಸಿದರು.
2022ರಲ್ಲಿ ಬಿಜೆಪಿ ಸರ್ಕಾರವು ಅತ್ತಾವರದ ಕುದ್ಮುಲ್ ರಂಗರಾವ್ ಸಮಾಧಿ ಅಭಿವೃದ್ಧಿಗೆ 3 ಕೋಟಿ ರೂಪಾಯಿ ಮಂಜೂರು ಮಾಡಿ ಗುದ್ದಲಿ ಪೂಜೆ ನಡೆಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಈ ಅನುದಾನಕ್ಕೆ ತಡೆ ನೀಡಿ, ಅಭಿವೃದ್ಧಿಯನ್ನು ಹಳ್ಳ ಹಿಡಿಸಿದೆ. ಈಗ ಅರಣ್ಯ ಇಲಾಖೆಯ ಸಮಸ್ಯೆ ಇದೆ ಎಂದು ಸುಳ್ಳು ನೆಪ ಹೇಳುತ್ತಿರುವುದು ಪೂಜ್ಯ ರಂಗರಾವ್ ಅವರಿಗೆ ಮಾಡುತ್ತಿರುವ ದ್ರೋಹ ಎಂದು ಅವರು ವಾಗ್ದಾಳಿ ನಡೆಸಿದರು.

ಮಾರ್ಚ್ ತಿಂಗಳಲ್ಲೇ ಮಂಗಳೂರಿನ ಪ್ರತಿ ವಾರ್ಡ್‌ಗಳಲ್ಲಿ ನೀರಿನ ಹಾಹಾಕಾರ ಶುರುವಾಗಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಪರಿಸ್ಥಿತಿಯ ಗಂಭೀರತೆ ಅರಿಯದೆ, ಜೂನ್-ಜುಲೈ ವರೆಗೂ ನೀರು ಕೊಡುತ್ತೇವೆ ಎಂದು ಕಾಟಾಚಾರದ ಭೇಟಿ ನೀಡಿ ಮೋಜು ಮಾಡುತ್ತಿದ್ದಾರೆ. ಇವರಿಗೆ ಜನರ ಕಷ್ಟದ ಬಗ್ಗೆ ಕನಿಷ್ಠ ಮಾಹಿತಿಯೂ ಇಲ್ಲ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಚುನಾಯಿತ ಪ್ರತಿನಿಧಿಗಳಿಲ್ಲದ ಸಮಯದಲ್ಲಿ ಆಡಳಿತಾಧಿಕಾರಿಗಳ ಮೂಲಕ ಆಸ್ತಿ ತೆರಿಗೆ ಏರಿಸಿ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹಾಕಲಾಗುತ್ತಿದೆ. ಒಂದೆಡೆ ಜನರಿಗೆ ತೆರಿಗೆಯ ಬರೆ ಹಾಕುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ-ಮಂಡಳಿಗಳಲ್ಲಿ ಸ್ಥಾನಮಾನ ನೀಡಿ ಜನರ ಬೆವರಿನ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದು ಅವರು ಕಿಡಿಕಾರಿದರು.

ಇ-ಖಾತಾ ಪಡೆಯಲು ಜನರು ಪಡುತ್ತಿರುವ ನರಕಯಾತನೆಗೆ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಇನ್ನು ಮಂಗಳೂರಿನ ಜಾಹೀರಾತು ಫಲಕಗಳ ಗುತ್ತಿಗೆಯನ್ನು ಸ್ಥಳೀಯರಿಗೆ ನೀಡದೆ, ತಮಿಳುನಾಡು ಮೂಲದವರಿಗೆ ನೀಡುವ ಮೂಲಕ ಸ್ಥಳೀಯ ಉದ್ಯಮಿಗಳ ಹೊಟ್ಟೆಗೆ ಹೊಡೆಯುವ ವ್ಯವಸ್ಥಿತ ಸಂಚು ನಡೆದಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರಮೇಶ್ ಕಂಡೆಟ್ಟು, ರವಿಶಂಕರ್ ಮಿಜಾರ್, ಮುಖೇಶ್ ಕುಮಾರ್, ಶಕೀಲಾ ಕಾವ, ನಿತಿತ್ ಕುಮಾರ್, ಸುರೇಖಾ ಹೆಗ್ಡೆ ಹಾಗೂ ಲಲ್ಲೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
