ಕಾಸರಗೋಡು: ಸಲಿಂಗಕಾಮಿ ಡೇಟಿಂಗ್ ಆ್ಯಪ್‌ ತಂದ ಸಂಕಷ್ಟ: ಬಾಲಕನಿಗೆ ಹಲ್ಲೆ- ಪ್ರಭಾವಿಗಳೇ ಆರೋಪಿಗಳು

ಕಾಸರಗೋಡು: ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ಹೈ–ಪ್ರೊಫೈಲ್ ಸಲಿಂಗಕಾಮಿ ಡೇಟಿಂಗ್ ಆ್ಯಪ್‌–ಸಂಬಂಧಿತ ಪೋಕ್ಸೊ ಪ್ರಕರಣ ಮತ್ತಷ್ಟು ಗಂಭೀರ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಬದುಕುಳಿದ 16 ವರ್ಷದ ಬಾಲಕನ ಮೇಲೆ ಸೋಮವಾರ ರಾತ್ರಿ ಮೂವರು ಪುರುಷರು ದೈಹಿಕವಾಗಿ ಹಲ್ಲೆ ನಡೆಸಿರುವುದಾಗಿ ಪೊಲೀಸ್‌ ಮೂಲಗಳಿಂದ ಲಭಿಸಿದೆ.

ಪ್ರಕರಣಗಳ ತನಿಖೆ ನಡೆಯುತ್ತಿರುವ ಮಧ್ಯೆಯೇ ಈ ಹಲ್ಲೆ ನಡೆದಿರುವುದು ಬಾಲಕನ ಭದ್ರತೆ ಕುರಿತ ಆತಂಕವನ್ನು ಹೆಚ್ಚಿಸಿದೆ. ತ್ರಿಕರಿಪುರದ ಎಟಿಎಂನಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ಬಾಲಕನನ್ನು ತಡೆದು ಹಲ್ಲೆ ನಡೆಸಲಾಗಿದೆ ಎಂದು ಚಂದೇರಾ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮೂವರು ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಪೊಲೀಸರ ಪ್ರಕಾರ, ಬಾಲಕ 2023ರಲ್ಲಿ 14 ವರ್ಷದವನಾಗಿದ್ದಾಗ ಡೇಟಿಂಗ್ ಆ್ಯಪ್ ‘ಗ್ರೈಂಡರ್’ನಲ್ಲಿ ತನ್ನನ್ನು ವಯಸ್ಕ ಎಂದು ಘೋಷಿಸಿಕೊಂಡು ಖಾತೆ ತೆರೆದಿದ್ದ. ಬಳಿಕ ಸರ್ಕಾರಿ ನೌಕರರು, ಉದ್ಯಮಿಗಳು ಹಾಗೂ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಹಿನ್ನೆಲೆಯುಳ್ಳ ಹಲವರು ಆತನ ಮೇಲೆ ಎರಡು ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿಸಿರುವುದು ನಿಖೆಯಲ್ಲಿ ಬಹಿರಂಗವಾಗಿತ್ತು. ಪ್ರಕರಣ ಬೆಳಕಿಗೆ ಬಂದ ನಂತರ ʻಗ್ರೈಂಡರ್ ಆ್ಯಪ್ʼ ಸಂಸ್ಥೆ ಬಾಲಕನ ಖಾತೆಯನ್ನು ಅಮಾನತು ಮಾಡಿತ್ತು. ಇದೇ ವೇಳೆ ಡೇಟಿಂಗ್ ಆ್ಯಪ್‌ಗಳಲ್ಲಿ ಕಠಿಣ ವಯಸ್ಸಿನ ಪರಿಶೀಲನೆ ವ್ಯವಸ್ಥೆ ಅಗತ್ಯವೆಂದು ಪೊಲೀಸರು ಒತ್ತಾಯಿಸಿದ್ದಾರೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ನಾಲ್ಕು ಜಿಲ್ಲೆಗಳ ನಾಲ್ಕು ಪೊಲೀಸ್ ಠಾಣೆಗಳಲ್ಲಿ ಒಟ್ಟು 16 ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಬಂಧಿತರಾಗಿರುವವರಲ್ಲಿ ಬೇಕಲ ಉಪಜಿಲ್ಲೆಯ ಸಹಾಯಕ ಶಿಕ್ಷಣಾಧಿಕಾರಿ ಸೈನುದ್ದೀನ್ ವಿ.ಕೆ. (52), ಫುಟ್‌ಬಾಲ್ ತರಬೇತುದಾರನಾಗಿದ್ದು, ಗಾಯಗೊಂಡ ನಂತರ ರೈಲ್ವೆ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದ ಆರ್‌ಪಿಎಫ್ ಅಧಿಕಾರಿ ಚಿತ್ರರಾಜ್ ಎರಾವಿಲ್ (48), ತ್ರಿಕರಿಪುರದ ವಲ್ವಕಾಡ್ ನಿವಾಸಿ ಮತ್ತು ಜಮಾತೆ ಇಸ್ಲಾಮಿ ಕಾರ್ಯಕರ್ತ ಕುಂಞಹಮ್ಮದ್ ಹಾಜಿ (55), ಪಿಲಿಕೋಡ್ ಪಂಚಾಯಿತಿಯ ವೆಳ್ಳಾಚಲದ ಎಂ. ಸುಕೇಶ್ (30), ಚೀಮೇನಿ ಪಂಚಾಯಿತಿಯ ಶಿಜಿತ್ (36), ತ್ರಿಕರಿಪುರದ ವಡಕೆ ಕೊವ್ವಳದ ರಯೀಸ್ (30), ಕಾಞಂಗಾಡ್ ಪೇಟೆಯ ಪಡನ್ನಕ್ಕಾಡ್‌ನ ರಂಜಾನ್ (64), ಚೀಮೇನಿಯ ನಾರಾಯಣನ್ ಚಂಬ್ರಕಣಂ (60), ಲೈಟ್ & ಸೌಂಡ್ ಮಾಲೀಕ ಚಂದೇರಾದ ಟಿ. ಮೊಹಮ್ಮದ್ ಅಫ್ಸಲ್ (23) ಹಾಗೂ ಯುವ ಕಾಂಗ್ರೆಸ್ ತ್ರಿಕರಿಪುರ ಪ್ರಧಾನ ಕಾರ್ಯದರ್ಶಿ ಸಿರಾಜುದ್ದೀನ್ ವಡಕುಂಪಾಡ್ (46) ಸೇರಿದ್ದಾರೆ. ಇವರಲ್ಲಿ ಕೆಲವರು ಸಾಮಾಜಿಕ–ರಾಜಕೀಯ ವಲಯದಲ್ಲಿಯೂ ಗುರುತಿಸಿಕೊಂಡವರು ಎಂಬುದು ಪ್ರಕರಣದ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಕೋಝಿಕ್ಕೋಡ್ ಕಸಬಾ ಪೊಲೀಸರು ಕೋಝಿಕ್ಕೋಡ್‌ನ ಕಿನಾಸ್ಸೆರಿಯ ಜವಳಿ ವ್ಯಾಪಾರ ಮಾಲೀಕ ಅಬ್ದುಲ್ ಮನಾಫ್ (37)ರನ್ನು ಬಂಧಿಸಿದ್ದಾರೆ. ಪಯ್ಯನ್ನೂರು ಪೊಲೀಸರು ಪೆರುಂಬಾದಲ್ಲಿ ಆಪ್ಟಿಕಲ್ ಶಾಪ್ ನಡೆಸುತ್ತಿದ್ದ ಪ್ರಜೀಶ್ (40) ಹಾಗೂ ಕೊರೋಮ್‌ನ ಸಣ್ಣ ಸಿವಿಲ್ ಗುತ್ತಿಗೆದಾರ ಗಿರೀಶ್ ಅವರನ್ನು ಬಂಧಿಸಿದ್ದಾರೆ.

ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಬಾಲಕನಿಗೆ ಅಗತ್ಯ ಭದ್ರತೆ ಹಾಗೂ ಕೌನ್ಸಿಲಿಂಗ್ ಒದಗಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚಿನ ಹಲ್ಲೆಯ ಹಿನ್ನೆಲೆ ಮತ್ತು ಅದರ ಹಿಂದೆ ಇರುವ ಶಕ್ತಿಗಳ ಬಗ್ಗೆ ಆಳವಾದ ತನಿಖೆ ನಡೆಸಲಾಗುತ್ತಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

error: Content is protected !!