ಸುರತ್ಕಲ್: ಡ್ರಗ್ಸ್ ದೇಹಕ್ಕೆ ಸೇರಿದ ಕೂಡಲೇ ರಕ್ತದ ಮೂಲಕ ಮೆದುಳಿಗೆ ತಲುಪಿ ನರವ್ಯವಸ್ಥೆಯನ್ನು ಹೈಜಾಕ್ ಮಾಡುತ್ತದೆ. ಡ್ರಗ್ಸ್ ಎನ್ನುವುದು ಕೇವಲ ಒಂದು ಕೆಟ್ಟ ಚಟವಲ್ಲ, ಅದು ನೇರವಾಗಿ ಮೆದುಳಿನ ನಿಯಂತ್ರಣವನ್ನು ಕಸಿದುಕೊಳ್ಳುವ ರಾಸಾಯನಿಕ ವಿಷ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವೈ. ಎಚ್ಚರಿಸಿದರು.

ಯೂತ್ ಫಾರ್ ನೇಷನ್ ಹಾಗೂ ಗೋವಿಂದ ದಾಸ ಕಾಲೇಜುಗಳ ಜಂಟಿ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮಜಯಂತಿಯ ಅಂಗವಾಗಿ ಸುರತ್ಕಲ್ ಗೋವಿಂದ ದಾಸ ಪ.ಪೂ. ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ‘ಡ್ರಗ್ಸ್ ಫ್ರೀ ಇಂಡಿಯಾ’ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಡ್ರಗ್ಸ್ ಸೇವನೆಯ ಬಳಿಕ ಮಾನವ ದೇಹ ಮತ್ತು ಮನಸ್ಸಿನ ಮೇಲೆ ಉಂಟಾಗುವ ಭೀಕರ ದುಷ್ಪರಿಣಾಮಗಳನ್ನು ಅವರು ಸ್ಪಷ್ಟವಾಗಿ ವಿವರಿಸಿದರು.
ಡ್ರಗ್ಸ್ ಸೇವನೆಯ ಆರಂಭಿಕ ಹಂತದಲ್ಲಿ ಸ್ವಲ್ಪ ಉಲ್ಲಾಸ, ಶಕ್ತಿ ಅಥವಾ ಮೂಡ್ ಎಲೆವೇಷನ್ (ಮನಸ್ಥಿತಿಯ ತಾತ್ಕಾಲಿಕ ಏರಿಕೆ) ಆಗುತ್ತಿರುವಂತೆ ಭಾಸವಾಗಬಹುದು. ಆದರೆ ಈ ಭ್ರಮೆಯ ನಂತರ ದೇಹ ನಿಧಾನಗತಿಯಾಗುತ್ತದೆ, ಚಿಂತನಾ ಶಕ್ತಿ ಕುಗ್ಗುತ್ತದೆ, ತೂರಾಟ ಉಂಟಾಗುತ್ತದೆ, ಮಾತಿನಲ್ಲಿ ಅಸ್ಪಷ್ಟತೆ ಕಾಣಿಸಿಕೊಳ್ಳುತ್ತದೆ, ನೆನಪಿನ ಶಕ್ತಿ ಕಡಿಮೆಯಾಗುತ್ತದೆ ಹಾಗೂ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ ನಾಶವಾಗುತ್ತದೆ ಎಂದು ಅವರು ತಿಳಿಸಿದರು. ಕೆಲವೊಂದು ಡ್ರಗ್ಸ್‌ಗಳು ತಾತ್ಕಾಲಿಕ ಉತ್ಸಾಹ ನೀಡಿದರೂ ಒಳಗೊಳಗೆ ದೇಹದ ಅಂಗಾಂಗಗಳನ್ನು ಹಾಳುಮಾಡುತ್ತವೆ ಎಂದರು.

ಡ್ರಗ್ಸ್‌ಗೆ ಅಡಿಕ್ಟ್ ಆದ ಬಳಿಕ ಅದನ್ನು ಬಿಡಲು ಪ್ರಯತ್ನಿಸಿದಾಗ ‘ವಿದ್ರಾವಲ್ ಲಕ್ಷಣಗಳು’ ಆರಂಭವಾಗುತ್ತವೆ. ವಾಂತಿ ಭಾವನೆ, ಕಂಪನ, ಆತಂಕ, ತಡೆಯಲಾಗದ ಹಂಬಲ (ಕ್ರೇವಿಂಗ್), ನಿದ್ರಾಹೀನತೆ ಹಾಗೂ ತೀವ್ರ ಮಾನಸಿಕ ಅಶಾಂತಿ ಕಾಣಿಸಿಕೊಳ್ಳುತ್ತದೆ. ಈ ಹಂತದಲ್ಲಿ ಮೆದುಳು ಈಗಾಗಲೇ ಡ್ರಗ್ಸ್‌ಗೆ ಒಗ್ಗೊಂಡಿರುವುದರಿಂದ “ನಾನು ಬಿಡುತ್ತೇನೆ” ಎಂಬ ನಿರ್ಧಾರ ಮಾತ್ರ ಸಾಕಾಗುವುದಿಲ್ಲ ಎಂದು ಹೇಳಿದರು. ಮಿತಿಮೀರಿದ ಡ್ರಗ್ಸ್ ಸೇವನೆ ದೈಹಿಕ ಕುಸಿತ, ಮಾನಸಿಕ ಅಸ್ವಸ್ಥತೆ ಹಾಗೂ ಪ್ರಾಣಾಪಾಯಕ್ಕೂ ಕಾರಣವಾಗಬಹುದು ಎಂಬ ಗಂಭೀರ ಎಚ್ಚರಿಕೆಯನ್ನು ಅವರು ನೀಡಿದರು.

ಡ್ರಗ್ಸ್ ಎಂದರೆ ಕೇವಲ ಗಾಂಜಾ ಅಥವಾ ಹೆರಾಯಿನ್ ಮಾತ್ರವಲ್ಲ; ಸಿಗರೇಟ್ ಮತ್ತು ಆಲ್ಕೋಹಾಲ್ ಕೂಡ ಅದೇ ವರ್ಗಕ್ಕೆ ಸೇರುತ್ತವೆ ಎಂದು ವಿವರಿಸಿದ ಅವರು, ಕೆನೆಬಿಸ್, ಓಪಿಯೊಯ್ಡ್ಸ್ ಹಾಗೂ ಸಿಂಥೆಟಿಕ್ ಡ್ರಗ್ಸ್‌ಗಳ ಪರಿಣಾಮ, ಡಿಪ್ರೆಷನ್, ಮೂಡ್ ಎಲೆವೇಷನ್ ಹಾಗೂ ದೇಹದ ಮೇಲೆ ಬೀರುವ ದುಷ್ಪರಿಣಾಮಗಳನ್ನು ಸರಳವಾಗಿ ವಿವರಿಸಿದರು.
ಯುವಕರು ಸರಿದಾರಿಗೆ ಬಂದಾಗ ಮಾತ್ರ ಸಮಾಜ ಮತ್ತು ದೇಶವನ್ನು ಕಟ್ಟಲು ಸಾಧ್ಯ. ನಿಮ್ಮಂತಹ ಯುವಜನತೆ ದಾರಿ ತಪ್ಪಿದರೆ ಅದು ನಿಮ್ಮ ಬದುಕಿಗೆ ಮಾತ್ರವಲ್ಲ, ಇಡೀ ಸಮಾಜದ ಭವಿಷ್ಯಕ್ಕೂ ಅಪಾಯವಾಗುತ್ತದೆ. ಚಾರಿತ್ರ್ಯವನ್ನು ಗಟ್ಟಿ ಮಾಡುವುದೇ ರಾಷ್ಟ್ರ ನಿರ್ಮಾಣದ ಮೊದಲ ಹೆಜ್ಜೆ ಎಂದು ಹೇಳಿದರು. ರಾಜಕೀಯ ನಾಯಕನಾಗಿ ಅಲ್ಲ, ವೈದ್ಯಕೀಯ ಹಿನ್ನೆಲೆಯ ಪ್ರೊಫೆಸರ್ ಆಗಿ ಯುವಕರ ಭವಿಷ್ಯದ ಬಗ್ಗೆ ಕಾಳಜಿಯಿಂದ ಮಾತನಾಡಲು ಬಂದಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಜಯಚಂದ್ರ ಹತ್ವಾರ್ ಹಾಗೂ ಭರತ್ ರಾಜ್ ಕೃಷ್ಣಾಪುರ ಪ್ರಾಸ್ತಾವಿಕ ಮಾತುಗಳನ್ನು ನಡೆಸಿದರು. ಉಪಪ್ರಾಂಶುಪಾಲೆ ಸುನೀತಾ, ರಮೇಶ್ ರಾವ್, ರಮೇಶ್ ಭಟ್, ಲಕ್ಷ್ಮಿ ಪಿ. ಸೇರಿದಂತೆ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.