ಶಬರಿಮಲೆ: ಮಂಡಲ–ಮಕರವಿಳಕು ಉತ್ಸವದ ನಂತರ ದೇವಾಲಯ ಬಂದ್‌ 

ಶಬರಿಮಲೆ: ಮಂಡಲ–ಮಕರವಿಳಕು ಉತ್ಸವದ ಅಧಿಕೃತ ಮುಕ್ತಾಯದ ಹಿನ್ನೆಲೆಯಲ್ಲಿ ಮಂಗಳವಾರ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯವನ್ನು ವಿಧಿವಿಧಾನಗಳೊಂದಿಗೆ ಮುಚ್ಚಲಾಯಿತು. ಪಂದಳಂ ಅರಮನೆಯ ರಾಜ ಪ್ರತಿನಿಧಿ ಪುನರ್ಥಮ್ ತಿರುನಾಳ್ ನಾರಾಯಣ ವರ್ಮ ಅವರು ದರ್ಶನ ಪಡೆದ ಬಳಿಕ ಬೆಳಿಗ್ಗೆ 6.45ಕ್ಕೆ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಯಿತು.

ಇದಕ್ಕೂ ಮುನ್ನ ಬೆಳಿಗ್ಗೆ 5 ಗಂಟೆಗೆ ದೇವಾಲಯವನ್ನು ತೆರೆಯಲಾಗಿದ್ದು, ನಿತ್ಯ ಆಚರಣೆಗಳು ನೆರವೇರಿದವು. ಪೂರ್ವ ಮಂಟಪದಲ್ಲಿ ಗಣಪತಿ ಹೋಮ ಜರುಗಿಸಲಾಯಿತು. ದೇವಾಲಯದ ಅರ್ಚಕ ಇ.ಡಿ. ಪ್ರಸಾದ್ ನಂಬೂತಿರಿ ಅವರು ಅಯ್ಯಪ್ಪ ಸ್ವಾಮಿಯ ವಿಗ್ರಹಕ್ಕೆ ವಿಭೂತಿಯಾಭಿಷೇಕ ನೆರವೇರಿಸಿ, ರುದ್ರಾಕ್ಷಿ ಮಣಿಗಳು ಹಾಗೂ ಯೋಗದಂಡದಿಂದ ಅಲಂಕರಿಸಿದರು. ಬಳಿಕ ಹರಿವರಾಸನಂ ಪಠಿಸಲಾಯಿತ್ತಲ್ಲದೆ, ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಗರ್ಭಗುಡಿಯನ್ನು ಮುಚ್ಚಲಾಯಿತು.

ದೇವಾಲಯ ಮುಚ್ಚುವ ಕ್ರಮದ ಭಾಗವಾಗಿ ಕೀಲಿಯನ್ನು ದೇವಸ್ವಂ ಕಾರ್ಯನಿರ್ವಾಹಕ ಅಧಿಕಾರಿ ಒ.ಜಿ. ಬಿಜು ಅವರ ಸಮ್ಮುಖದಲ್ಲಿ ಪಂದಳಂ ಅರಮನೆಯ ಪ್ರತಿನಿಧಿಗೆ ಹಸ್ತಾಂತರಿಸಲಾಯಿತು. ನಂತರ ಶಬರಿಮಲೆ ಆಡಳಿತ ಅಧಿಕಾರಿ ಎಸ್. ಶ್ರೀನಿವಾಸನ್ ಅವರು ಅರಮನೆಯ ಪ್ರತಿನಿಧಿಯಿಂದ ಕೀಲಿಯನ್ನು ಸ್ವೀಕರಿಸಿದರು. ಇದರೊಂದಿಗೆ ದೇವಾಲಯದ ಮುಚ್ಚುವಿಕೆಯ ಸಾಂಪ್ರದಾಯಿಕ ಪ್ರಕ್ರಿಯೆ ಸಂಪನ್ನಗೊಂಡಿತು.

ಅನಂತರ ದೇವರ ಪವಿತ್ರ ಆಭರಣಗಳ ವಿಧ್ಯುಕ್ತ ಮೆರವಣಿಗೆ ಪಂದಳಂ ಸ್ರಂಪಿಕ್ಕಲ್ ಅರಮನೆಯತ್ತ ಪ್ರಾರಂಭವಾಯಿತು. ಪೆರಿಯ ಸ್ವಾಮಿ ಮರುತುವನ ಶಿವನಕುಟ್ಟಿ ನೇತೃತ್ವದ 30 ಸದಸ್ಯರ ತಂಡವು ಈ ಪವಿತ್ರ ಆಭರಣಗಳನ್ನು ಸಾಗಿಸುತ್ತಿದ್ದು, ಈ ತಂಡವು ಜನವರಿ 23ರಂದು ಪಂದಳಂ ಸ್ರಂಪಿಕ್ಕಲ್ ಅರಮನೆಯನ್ನು ತಲುಪಲಿದೆ ಎಂದು ತಿಳಿದುಬಂದಿದೆ.

error: Content is protected !!