ಕಾಸರಗೋಡು: ಸೋಮವಾರ ರಾತ್ರಿ ಚಟ್ಟಂಚಲ್ ಸಮೀಪದ ತೆಕ್ಕಿಲ್ಪರಂಬದಲ್ಲಿ ಬಿಎಂಡಬ್ಲ್ಯು ಕಾರು ಟ್ರಕ್‌ಗೆ ಮುಖಾಮುಖಿ ಢಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ ಮಂಗಳೂರಿನ ಇಬ್ಬರು ವ್ಯಾಪಾರ ಪಾಲುದಾರರು ಸಾವನ್ನಪ್ಪಿ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಮೃತರನ್ನು ಉಳ್ಳಾಲ ಸಜಿಪನಾಡುವಿನ ಹಶೀಫ್ ಮೊಹಮ್ಮದ್ (41) ಮತ್ತು ದೇರಳಕಟ್ಟೆ ನಟ್ಟಕ್ಕಲ್‌ನ ಮೊಹಮ್ಮದ್ ಶೆಫೀಕ್ (23) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಮಂಗಳೂರು ಮೂಲದ ಹಾಶಿಮ್ (23) ಮತ್ತು ರಿಯಾಸ್ (24) ಅವರನ್ನು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಜನವರಿ 19ರಂದು ರಾತ್ರಿ ಸುಮಾರು 10 ಗಂಟೆಗೆ ಈ ಅಪಘಾತ ಸಂಭವಿಸಿದ್ದು, ನಾಲ್ವರು ಸ್ನೇಹಿತರು ಹಾಗೂ ವ್ಯಾಪಾರ ಪಾಲುದಾರರು(ಉದ್ಯಮಿಗಳು) ವಯನಾಡಿನಲ್ಲಿ ಬಾಟಲಿ ಕುಡಿಯುವ ನೀರಿನ ಉದ್ಯಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಗಳೂರಿಗೆ ಹಿಂತಿರುಗುತ್ತಿದ್ದರು. ಚಟ್ಟಂಚಲ್ ಬಳಿಯ ರಾಷ್ಟ್ರೀಯ ಹೆದ್ದಾರಿ–66ರ ಆರು ಪಥಗಳ ಕಾಮಗಾರಿ ಅಪೂರ್ಣಗೊಂಡಿರುವ ಸ್ಥಳದಲ್ಲಿ, ಹೆದ್ದಾರಿಯ ಒಂದು ಬದಿಯಲ್ಲಿ ಸಂಚಾರವನ್ನು ಮೂರೇ ಪಥಗಳಿಗೆ ಸೀಮಿತಗೊಳಿಸಲಾಗಿದ್ದು, ಇದೇ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಡಿಕ್ಕಿಯ ತೀವ್ರತೆಗೆ ಬಿಎಂಡಬ್ಲ್ಯು ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾಸರಗೋಡು ಅಗ್ನಿಶಾಮಕ ಹಾಗೂ ರಕ್ಷಣಾ ಸಿಬ್ಬಂದಿ ವಾಹನವನ್ನು ಕತ್ತರಿಸಿ ಒಳಗೆ ಸಿಲುಕಿದ್ದವರನ್ನು ಹೊರತೆಗೆದರು. ಹಶೀಫ್ ಮತ್ತು ಶೆಫೀಕ್ ಅವರನ್ನು ತಕ್ಷಣ ಚೆಂಗಲಾದ ಆಸ್ಟರ್ ಮಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.
ಮೇಲ್ಪರಂಬ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಅವಶೇಷಗಳನ್ನು ತೆರವುಗೊಳಿಸಿದ್ದು, ಅಪಘಾತದ ನಂತರ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಡಚಣೆ ಉಂಟಾಯಿತು. ಜನರಲ್ ಆಸ್ಪತ್ರೆಯಲ್ಲಿ ಶವಪರೀಕ್ಷೆಯ ಬಳಿಕ ಮೃತದೇಹಗಳನ್ನು ಅಂತ್ಯಕ್ರಿಯೆಗಾಗಿ ಅವರ ಸ್ವಗ್ರಾಮಗಳಿಗೆ ಕೊಂಡೊಯ್ಯಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.