ಮಂಗಳೂರು: ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಕೊಂಕಣಿ ಲೇಖಕ್ ಸಂಘ್, ಕರ್ನಾಟಕದ 2026ನೇ ಸಾಲಿನ ಕೊಂಕಣಿ ಸಾಹಿತ್ಯ ಪ್ರಶಸ್ತಿಗೆ ಖ್ಯಾತ ಕೊಂಕಣಿ ಲೇಖಕ ಶ್ರೀ ಪೆಟ್ರಿಕ್ ಕಾಮಿಲ್ ಮೊರಾಸ್ (ಎಂ. ಪೆಟ್ರಿಕ್) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಸಂಚಾಲಕ ರಿಚರ್ಡ್ ಮೊರಾಸ್ ತಿಳಿಸಿದರು.

ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2018ರಲ್ಲಿ ಸ್ಥಾಪನೆಯಾದ ಕೊಂಕಣಿ ಲೇಖಕ್ ಸಂಘ್, 2022ರಿಂದ ಕೊಂಕಣಿ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ ಲೇಖಕರನ್ನು ಗೌರವಿಸುವ ನಿರ್ಧಾರ ಕೈಗೊಂಡಿದ್ದು, ಅದರ ಭಾಗವಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು ರೂ.25,000 ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ನವೆಂಬರ್ 17, 1945ರಂದು ಜನಿಸಿದ ಪೆಟ್ರಿಕ್ ಕಾಮಿಲ್ ಮೊರಾಸ್ ಅವರು ಕೊಂಕಣಿ ಸಾಹಿತ್ಯ ಲೋಕದಲ್ಲಿ ಎಂ. ಪೆಟ್ರಿಕ್ ಎಂದೇ ಪ್ರಸಿದ್ಧರಾಗಿದ್ದು, ಬಾಲ್ಯದ ಕಷ್ಟಗಳ ನಡುವೆಯೇ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ ಎಂದು ವಿವರಿಸಿದರು.

ಐದನೇ ತರಗತಿಯಲ್ಲೇ ವಿದ್ಯಾಭ್ಯಾಸ ಮೊಟಕುಗೊಳಿಸಬೇಕಾದ ಪರಿಸ್ಥಿತಿಯಲ್ಲೂ, ಮಾರ್ಗದರ್ಶಕ ಜೆ.ಬಿ. ರಸ್ಕೀನ್ಹಾ ಅವರ ಪ್ರೋತ್ಸಾಹದಿಂದ ಪುಸ್ತಕ ಮಾರಾಟಗಾರರಾಗಿ ಹಾಗೂ ‘ಕಾಣಿಕ್’ ಪತ್ರಿಕೆಯ ಸಹ ಸಂಪಾದಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಅವರು, ನಂತರ 800ಕ್ಕೂ ಹೆಚ್ಚು ಸಣ್ಣ ಕಥೆಗಳು, 400ಕ್ಕೂ ಹೆಚ್ಚು ಲೇಖನಗಳು ಹಾಗೂ ಹತ್ತು ಕಾದಂಬರಿಗಳನ್ನು ರಚಿಸಿದ್ದಾರೆ. ‘ನಿತ್ಯಾದರ್ ಪ್ರಕಾಶನ’ದ ಮೂಲಕ ನಾಟಕಗಳು ಮತ್ತು ಪತ್ತೇದಾರಿ ಕಥೆಗಳು ಸೇರಿದಂತೆ ಅನೇಕ ಕೃತಿಗಳನ್ನು ಪ್ರಕಟಿಸಿ ಕೊಂಕಣಿ ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ‘ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿ – 2026’ ಈಗಾಗಲೇ ಲಭಿಸಿದೆ.

ಕೊಂಕಣಿ ಲೇಖಕ್ ಸಂಘ್ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಫೆಬ್ರವರಿ 7, 2026ರಂದು ಶನಿವಾರ ಸಂಜೆ 6.30ಕ್ಕೆ ಸಂದೇಶ ಪ್ರತಿಷ್ಠಾನ, ಬಜ್ಜೋಡಿ, ಮಂಗಳೂರು ಇಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸದಸ್ಯ ಡೊಲ್ಫಿ ಎಫ್. ಲೋಬೊ, ಸಲಹಾ ಸಮಿತಿ ಸದಸ್ಯರಾದ ಡಾ. ಜೆರಿ ನಿಡ್ಡೋಡಿ ಹಾಗೂ ಜೆ.ಎಫ್. ಡಿಸೋಜಾ ಉಪಸ್ಥಿತರಿದ್ದರು.