ವಿಟ್ಲ ಶ್ರೀ ಯೋಗೀಶ್ವರ ಜೋಗಿ ಮಠ ಪುನರ್ ನಿರ್ಮಾಣ: ಫೆ.2ರಂದು ಮಹಾರುದ್ರಯಾಗ

ಮಂಗಳೂರು: ವಿಟ್ಲ ಶ್ರೀ ಯೋಗೀಶ್ವರ ಜೋಗಿ ಮಠದ ದೇಗುಲ ಪುನರ್ ನಿರ್ಮಾಣ ಹಾಗೂ ಶ್ರೀಮಠದ ಸಾನಿಧ್ಯ ವೃದ್ಧಿಗಾಗಿ ಫೆಬ್ರವರಿ 2ರಂದು ಮಹಾರುದ್ರಯಾಗ ಆಯೋಜಿಸಲಾಗಿದೆ ಎಂದು ಹಿರಿಯ ಪತ್ರಕರ್ತ ಹಾಗೂ ವಿಟ್ಲ ಶ್ರೀ ಯೋಗೀಶ್ವರ ಜೋಗಿ ಮಠ ಪುನರ್ ನಿರ್ಮಾಣ ಸಮಿತಿ (ರಿ.) ಅಧ್ಯಕ್ಷ ಯಶವಂತ ವಿಟ್ಲ ತಿಳಿಸಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ಕದ್ರಿಯ ಜೋಗಿ ಮಠದಂತೆ ವಿಟ್ಲದಲ್ಲೂ ಸಾವಿರ ವರ್ಷಗಳ ಇತಿಹಾಸವಿರುವ ಶ್ರೀ ಯೋಗೀಶ್ವರ ಜೋಗಿ ಮಠವಿದ್ದು, ಅಖಿಲ ಭಾರತ ವರ್ಷಿಯ ಭೇಷ್ ಭಾರತ ಪಂಥ್ ಅವಧೂತ ಸಂಪ್ರದಾಯದಂತೆ ಹನ್ನೆರಡು ವರ್ಷಕ್ಕೊಮ್ಮೆ ಮಠಾಧೀಶರ ನೇಮಕ ಹಾಗೂ ಮಂಗಳೂರು ಕದ್ರಿ ಮಠದಲ್ಲಿ ಪಟ್ಟಾಭಿಷೇಕ ನಡೆಯುವ ಪರಂಪರೆ ಇದೆ. ವಿಟ್ಲ ಮಠವು ಸೀಮೆಯ 23 ಗ್ರಾಮಗಳ ಜೋಗಿ ಸಮಾಜದವರ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ಮಠ ಹಾಗೂ ಜೋಗಿ ಸಮಾಜದ ನಡುವೆ ಶತಶತಮಾನಗಳ ಅವಿನಾಭಾವ ಸಂಬಂಧವಿದೆ ಎಂದು ವಿವರಿಸಿದರು.

ಶ್ರೀ ಕಾಶೀಕಾಳ ಭೈರವ, ಶ್ರೀ ಮಂಜುನಾಥ ಮತ್ತು ಶ್ರೀ ವ್ಯಾಘ್ರ ಚಾಮುಂಡಿ ದೇಗುಲಗಳು ಜೀರ್ಣಾವಸ್ಥೆಯಲ್ಲಿದ್ದ ಹಿನ್ನೆಲೆ, ವಿಟ್ಲ ಮಠಾಧೀಶರಾದ ರಾಜಗುರು ಶ್ರೀ ಶ್ರದ್ಧಾನಾಥಜೀ ಅವರ ಮಾರ್ಗದರ್ಶನದಲ್ಲಿ ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ವಾಸ್ತುಶಿಲ್ಪಿಗಳಿಂದ ರೂ.2.50 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದ್ದು, 2024 ಫೆಬ್ರವರಿ 1ರಂದು ಶಿಲಾನ್ಯಾಸ ನೆರವೇರಿದೆ. ಭಕ್ತರು ಹಾಗೂ ದಾನಿಗಳ ಸಹಕಾರದಿಂದ ಇದುವರೆಗೆ ರೂ.1 ಕೋಟಿ 10 ಲಕ್ಷ ಸಂಗ್ರಹವಾಗಿದ್ದು, ಶಿಲಾಮಯ ಮಂಜುನಾಥ ಹಾಗೂ ಕಾಲಭೈರವ ದೇಗುಲಗಳ ಕಾಮಗಾರಿ ಪೂರ್ಣಗೊಂಡಿದೆ. ಶ್ರೀಮಠದಲ್ಲಿ ತೀರ್ಥಬಾವಿ ನಿರ್ಮಾಣದ ಅಂತಿಮ ಹಂತದ ಕೆಲಸ ಬಾಕಿಯಿದೆ ಎಂದು ತಿಳಿಸಿದರು.

ಮಠದ ಪುನರ್ ನಿರ್ಮಾಣಕ್ಕೆ ನಿಧಿ ಸಂಚಯನ ಉದ್ದೇಶದಿಂದ ಫೆಬ್ರವರಿ 2, 2026ರಂದು ಬೆಳಗ್ಗೆ 7.35ರಿಂದ ಮಹಾರುದ್ರಯಾಗ ನಡೆಯಲಿದೆ. ಸೀಮೆಯ ತಂತ್ರಿವರ್ಯರಾದ ವೇ. ಮೂ. ಕುಂಟುಕುಡೇಲು ರಘುರಾಮ ತಂತ್ರಿಗಳ ಪೌರೋಹಿತ್ಯದಲ್ಲಿ, ವಾಸ್ತುಶಿಲ್ಪಿ ಶ್ರೀ ಜಗನ್ನಿವಾಸ ರಾವ್ ಹಾಗೂ ವಿಟ್ಲ ಅರಮನೆಯ ಬಂಗಾರ ಅರಸರ ಉಪಸ್ಥಿತಿಯಲ್ಲಿ ಯಾಗ ಸಂಪನ್ನಗೊಳ್ಳಲಿದೆ. ಜೊತೆಗೆ ಕಾಶೀಕಾಲಭೈರವನಿಗೆ ರೋಟ್ ಪೂಜೆ ಹಾಗೂ ವ್ಯಾಘ್ರ ಚಾಮುಂಡಿಗೆ ತಂಬಿಲಾರಾಧನೆ ಸೇವೆಗಳು ಜರಗಲಿವೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಕಾರ್ಯಾಧ್ಯಕ್ಷ ಡಾ. ಗೀತಪ್ರಕಾಶ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಎಂ.ಕೆ., ರುದ್ರಮಹಾಯಾಗ ಸಮಿತಿಯ ಕೋಶಾಧಿಕಾರಿ ಭುಜಂಗ ಕಣಂತೂರು, ಮಾಧ್ಯಮ ಪ್ರಮುಖ ರಮೇಶ್ ಕನ್ಯಾನ, ಕೋಶಾಧಿಕಾರಿ ಸತೀಶ್ ಕುಮಾರ್ ಕೂಟತ್ತಜೆ ಹಾಗೂ ವಿಟ್ಲ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ರವಿಕುಮಾರ್ ಜೋಗಿ ಉಪಸ್ಥಿತರಿದ್ದರು.

error: Content is protected !!