ಮಂಗಳೂರು: ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆಂಜಾರು 3ನೇ ವಾರ್ಡ್ ಮೂಡುಬಾಳಿಕೆ ಪ್ರದೇಶದಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿಯ 10 ಕುಟುಂಬಗಳ ಏಕೈಕ ರಸ್ತೆ ಸಂಪರ್ಕವನ್ನು ಭಾರತೀಯ ಕೋಸ್ಟ್‌ಗಾರ್ಡ್ ಕಂಪೌಂಡ್ ನಿರ್ಮಾಣದಿಂದ ಮುಚ್ಚಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.)ಯ ಜಿಲ್ಲಾ ಸಂಘಟನಾ ಸಂಚಾಲಕ ರಘು ಕೆ. ಎಕ್ಕಾರು ಆರೋಪಿಸಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 70 ವರ್ಷಗಳಿಂದ ಈ ಕುಟುಂಬಗಳು ಅಲ್ಲೇ ವಾಸಿಸುತ್ತಿದ್ದು, 1995ರಲ್ಲಿ ಸರ್ಕಾರ ಮನೆ ನಿವೇಶನದ ಹಕ್ಕುಪತ್ರ ನೀಡಿದೆ. ಕುಟುಂಬಗಳ ಮನೆಗಳ ಸುತ್ತಲೂ ಖಾಸಗಿ ಜಮೀನುಗಳಿದ್ದು, ಸರ್ವೆ ನಂ.116/7ಕ್ಕೆ ಹೊಂದಿಕೊಂಡಿರುವ ಕಾಲುದಾರಿ ಮತ್ತು ಕಚ್ಚಾ ರಸ್ತೆಯೇ ದೈನಂದಿನ ಸಂಚಾರ, ವಿದ್ಯಾಭ್ಯಾಸ, ಸಾಮಗ್ರಿ ಸಾಗಣೆ ಹಾಗೂ ತುರ್ತು ಸಂದರ್ಭಗಳಲ್ಲಿ ರೋಗಿ–ಹಿರಿಯ ನಾಗರಿಕರನ್ನು ಸಾಗಿಸಲು ಇದ್ದ ಏಕೈಕ ಮಾರ್ಗವಾಗಿದೆ. ಮಳೆಗಾಲದಲ್ಲಿ ಈ ಪ್ರದೇಶ ಸಂಪೂರ್ಣ ಜಲಾವೃತವಾಗುವ ಹಿನ್ನೆಲೆ ಈ ರಸ್ತೆ ಅತ್ಯಂತ ಅಗತ್ಯವಾಗಿತ್ತು ಎಂದು ತಿಳಿಸಿದರು.
ಆದರೆ ಇತ್ತೀಚೆಗೆ ಭಾರತೀಯ ಕೋಸ್ಟ್‌ಗಾರ್ಡ್ ಅಧಿಕಾರಿಗಳು ಸರ್ವೆ ನಂ.116/7ರಲ್ಲಿ ಕಂಪೌಂಡ್ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿರುವುದರಿಂದ, ಈ ದಲಿತ ಕುಟುಂಬಗಳಿಗೆ ಇದ್ದ ಏಕೈಕ ರಸ್ತೆ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಇದರ ಪರಿಣಾಮ ದಿನನಿತ್ಯದ ಸಂಚಾರ, ಅಗತ್ಯ ವಸ್ತುಗಳ ಸಾಗಣೆ ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ಕುಟುಂಬಗಳು ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ಆರೋಪಿಸಿದರು.

ಈ ಕುರಿತು ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು, ಕೋಸ್ಟ್‌ಗಾರ್ಡ್ ಅಧಿಕಾರಿಗಳು, ತಹಶೀಲ್ದಾರರು ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣ ಕಂಪೌಂಡ್ ಕಾಮಗಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿದು ಸ್ಥಳ ಪರಿಶೀಲನೆ ನಡೆಸಬೇಕು. ಭಾರತೀಯ ಕೋಸ್ಟ್‌ಗಾರ್ಡ್‌ರೊಂದಿಗೆ ಚರ್ಚಿಸಿ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಇರುವ ಏಕೈಕ ರಸ್ತೆಯನ್ನು ಉಳಿಸಿಕೊಂಡೇ ಕಂಪೌಂಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅನ್ಯಾಯದ ವಿರುದ್ಧ ಪ್ರತಿಭಟನಾ ಧರಣಿ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಂಜಾರು ಗ್ರಾಮದ ಸಂಚಾಲಕ ಲಿಂಗಪ್ಪ ಕುಂದರ್ ಸೇರಿದಂತೆ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.