ಬರೋಬ್ಬರಿ ರೂ.53 ಲಕ್ಷ ಮೌಲ್ಯದ 106 ಕೆಜಿ ಗಾಂಜಾ ಜಪ್ತಿ ಮಾಡಿದ ಪೊಲೀಸರು: ಗೂಡ್ಸ್‌ ವಾಹನದಲ್ಲಿಯೇ ಬಿಂದಾಸ್‌ ಸಾಗಾಟ

ಮಂಗಳೂರು: ಪುತ್ತೂರು ಗ್ರಾಮಾಂತರ ತಂಡದ ಪೊಲೀಸರು ತನ್ನ ಭರ್ಜರಿ ಕಾರ್ಯಾಚರಣೆಯಲ್ಲಿ ಬರೋಬ್ಬರಿ 53 ಲಕ್ಷ ಮೌಲ್ಯದ ಒಟ್ಟು 106.06 ಕೆಜಿ ಗಾಂಜಾ ಜಪ್ತಿ ಮಾಡಿದ್ದಲ್ಲದೆ ಇಬ್ಬರು ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿದ್ದಾರೆ. ಬೆಳ್ತಂಗಡಿ ಚಾರ್ಮಾಡಿ ಗ್ರಾಮದ ರಫೀಕ್ ಪಿ. (37) ಮತ್ತು ಅಬ್ದುಲ್ ಸಾದಿಕ್ (37) ಬಂಧಿತ ಆರೋಪಿಗಳು. ಆರೋಪಿಗಳು ಅಶೋಕ್‌ ಲೈಲ್ಯಾಂಡ್‌ ವಾಹನದಲ್ಲಿಯೇ ಬಿಂದಾಸ್‌ ಆಗಿ ಗಾಂಜಾ ಸಾಗಿಸುತ್ತಿದ್ದರು.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರು ತನ್ನ ಸಿಬ್ಬಂದಿ ಜೊತೆ ಪಡುವನ್ನೂರು ಗ್ರಾಮದ ಸಜಂಕಾಡಿ ಎಂಬಲ್ಲಿ ಕಾರು ಹಾಗೂ ಗೂಡ್ಸ್ ವಾಹನವನ್ನು ತಪಾಸಣೆಗಾಗಿ ನಿಲ್ಲಿಸಿ ಪರಿಶೀಲನೆ ನಡೆಸಿದ್ದಾರೆ. ಮೊದಲು ರಫೀಕ್‌ ಇದ್ದ ಕಾರನ್ನು ತಪಾಸಣೆ ನಡೆಸಿದಾಗ ಪ್ಲಾಸ್ಟಿಕ್ ಕವರಿನಲ್ಲಿ ಸುಮಾರು 100 ಗ್ರಾಂ ತೂಕವಿರುವ ಗಾಂಜಾ ಗಿಡದ ಎಲೆಗಳಂತೆ ಇದ್ದ ಸೊಪ್ಪು, ಹೂ, ಕಾಯಿ ತುಂಬಿಸಿ ಇದ್ದ ಕಟ್ಟು ಪತ್ತೆಯಾಗಿದೆ.. ಅದೇ ರೀತಿ ಅಬ್ದುಲ್ ಸಾದಿಕ್ ಚಲಾಯಿಸುತ್ತಿದ್ದ ಅಶೋಕ್‌ ಲೇಲ್ಯಾಂಡ್ ಗೂಡ್ಸ್‌ ವಾಹನ ಪರಿಶೀಲಿಸಿದಾಗ ಇದರಲ್ಲಿ ಬರೋಬ್ಬರಿ 106 ಕಿಲೋ ಗ್ರಾಂ ಮತ್ತು 60 ಗ್ರಾಂ ತೂಕದ ಒಟ್ಟು 73 ಕಟ್ಟು ಗಾಂಜಾ ಪತ್ತೆಯಾಗಿದ್ದು ಜಪ್ತಿ ಮಾಡಿದ್ದಾರೆ. ಈ ವಶಪಡಿಸಿದ ಗಾಂಜಾ ಮಾರುಕಟ್ಟೆ ಮೌಲ್ಯದಲ್ಲಿ ಬರೋಬ್ಬರಿ ರೂ.53,03,000/ ಎಂದು ಅಂದಾಜಿಸಲಾಗಿದೆ.

ಬಂಧಿತರಾದವರು ಆರೋಪಿಗಳ ಹೇಳಿಕೆಯ ಪ್ರಕಾರ, ಗಾಂಜಾವನ್ನು ಕೇರಳ, ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದರು. ಪೊಲೀಸರು ಗಾಂಜಾ, ಸಾಗಾಣಿಕೆಗೆ ಬಳಸಿದ ವಾಹನಗಳು ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮ ಸಂಖ್ಯೆ 09/2026, ಕಲಂ 8(c), 20(b)(ii)C, NDPS Act–1985 ರಡಿ ಪ್ರಕರಣ ದಾಖಲೆ ಮಾಡಲಾಗಿದೆ ಮತ್ತು ತನಿಖೆ ಮುಂದುವರಿಯುತ್ತಿದೆ.

ಈ ಕಾರ್ಯಾಚರಣೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಉಪ ನಿರೀಕ್ಷಕರಾದ ಗುಣಪಾಲ ಜೆ. ಅವರ ನೇತೃತ್ವದಲ್ಲಿ ಹರೀಶ್, ಹರ್ಷಿತ್, ಪ್ರಶಾಂತ್, ಅದ್ರಾಮ್, ಪ್ರಶಾಂತ್ ರೈ, ಪ್ರವೀಣ್ ರೈ, ಭವಿತ್ ರೈ, ನಾಗರಾಜ್, ಸತೀಶ್, ರಮೇಶ್, ಸುಬ್ರಮಣಿ ಮತ್ತು ವಿನೋದ್ ಸೇರಿದಂತೆ ತಂಡದ ಸಿಬ್ಬಂದಿ ಭಾಗವಹಿಸಿದ್ದರು.

error: Content is protected !!