ಮಂಗಳೂರು: ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ, ಪೊಲೀಸ್ ಇಲಾಖೆ ಮತ್ತು ರೋಶನಿ ನಿಲಯ ವಿದ್ಯಾಸಂಸ್ಥೆಯ ಅಪರಾಧಶಾಸ್ತ್ರ ವಿಭಾಗದ ಸಹಯೋಗದಲ್ಲಿ ಮಂಗಳೂರು ಕೇಂದ್ರ ಬಸ್ ನಿಲ್ದಾಣದಲ್ಲಿ ಜ. 27ರಂದು ಮಾದಕ ದ್ರವ್ಯಗಳ ವಿರುದ್ಧ ಜನಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಲಾಲ್‌ಬಾಗ್, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ ಬಾರ್ಡರ್ ಬಸ್ ನಿಲ್ದಾಣಗಳಲ್ಲಿ ಬೀದಿ ನಾಟಕ, ಸ್ಟಿಕ್ಕರ್ ಪ್ಲೆಕ್ಸ್‌ಗಳು ಹಾಗೂ ಸಾರ್ವಜನಿಕರಿಗೆ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ(ರಿ.)ದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ಹೇಳಿದರು.

ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಮಾದಕ ದ್ರವ್ಯಗಳ ವಿರುದ್ಧ ನಡೆದ ಸಮರ್ಥ ಹೋರಾಟಕ್ಕಾಗಿ ಮಂಗಳೂರಿನ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿಯನ್ನು ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ ಅಭಿನಂದಿಸಿದೆ. ಮಾದಕ ವಸ್ತುಗಳ ಹತೋಟಿಗೆ ತರುವಲ್ಲಿ ಅವರು ತೋರಿದ ದಕ್ಷತೆ ಮತ್ತು ಸಮರ್ಥ ಕಾರ್ಯಾಚರಣೆಗೆ ಸಂಘವು ಹೃದಯಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತಿದ್ದು, ಪೊಲೀಸ್ ಇಲಾಖೆಗೆ ಯಾವ ರೀತಿಯ ಸಹಕಾರವೂ ನೀಡಲು ಸಿದ್ಧವಾಗಿದೆ ಎಂದರು.
ಬಸ್ ಮಾಲಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು, ಹೊಸ ಬಸ್ ಖರೀದಿಗೆ ಈಗ ₹30ರಿಂದ ₹34 ಲಕ್ಷದವರೆಗೆ ವೆಚ್ಚವಾಗುತ್ತಿದ್ದು, ಅದಕ್ಕೆ ಜೊತೆಗೆ ವಾರ್ಷಿಕ ವಿಮೆ, ಮೂರು ತಿಂಗಳಿಗೆ ಒಮ್ಮೆ ತೆರಿಗೆ, ಡೀಸೆಲ್ ವೆಚ್ಚ, ನಿರ್ವಹಣೆ, ಚಾಲಕ–ನಿರ್ವಾಹಕರ ಸಂಬಳ ಹಾಗೂ ಬ್ಯಾಂಕ್ ಸಾಲದ ಕಂತುಗಳು ಮಾಲಕರ ಮೇಲೆ ಭಾರೀ ಆರ್ಥಿಕ ಒತ್ತಡವನ್ನು ಸೃಷ್ಟಿಸುತ್ತಿವೆ. ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿರುವ ನಡುವೆಯೂ ಈ ವೆಚ್ಚಗಳನ್ನು ಭರಿಸುವುದು ಬಹುತೇಕ ಮಾಲಕರಿಗೆ ಅಸಾಧ್ಯವಾಗುತ್ತಿದೆ ಎಂದರು.

ಸಾಮಾಜಿಕ ಹೊಣೆಗಾರಿಕೆಯ ಹೆಸರಿನಲ್ಲಿ ವಿಧಿಸಲಾದ ರಿಯಾಯಿತಿಗಳೂ ಖಾಸಗಿ ಬಸ್ ಉದ್ಯಮಕ್ಕೆ ಆರ್ಥಿಕ ಹೊಡೆತ ನೀಡುತ್ತಿವೆ. ವಿದ್ಯಾರ್ಥಿಗಳಿಗೆ ಶೇಕಡಾ 60ರಿಂದ 75ರವರೆಗೆ ರಿಯಾಯಿತಿ ಪಾಸ್, ವಿಕಲಚೇತನರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುವುದರಿಂದ ಬಸ್ ಮಾಲಕರ ಆದಾಯದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಇದರ ಪರಿಣಾಮವಾಗಿ ಬಸ್ ಸಿಬ್ಬಂದಿಯ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದರು.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಒಣಗಿದ ಮೀನು ಮಾರುವವರು ತಮ್ಮ ಮೀನುಗಳನ್ನು ರಸ್ತೆಯ ಮೇಲೆ ಹಾಕುತ್ತಿದ್ದಾರೆ. ನಿಲ್ದಾಣದ ಒಳಗೆ ಅನಧಿಕೃತವಾಗಿ ನಿರ್ಮಿತ ಗೂಡಂಗಡಿಗಳು ಬಸ್ಸುಗಳ ಪ್ರವೇಶಕ್ಕೆ ಅಡ್ಡಿಯಾಗುತ್ತಿವೆ. ಸಾರ್ವಜನಿಕರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸುರಕ್ಷಿತವಾಗಿ ನಡೆದುಕೊಂಡು ಹೋಗಲು ಸರಿಯಾದ ಪಥವಿಲ್ಲದಿರುವುದು ಪ್ರಮುಖ ಸಮಸ್ಯೆಯಾಗಿದ್ದು, ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುತ್ತಿದೆ ಎಂದರು.
ಕರಾವಳಿ ವೃತ್ತದಿಂದ ಅಂಬೇಡ್ಕರ್ ಸರ್ಕಲ್ ವರೆಗೆ ಹಾಗೂ ಫಳ್ನೀರ್ ರಸ್ತೆಯಿಂದ ಮಿಲಾಗ್ರಿಸ್ ಚರ್ಚ್, ಕೆಎಸ್‌ಆರ್‌ಟಿಸಿ ರಸ್ತೆ, ಬಂಟ್ಸ್ ಹಾಸ್ಟೇಲ್, ಬಲ್ಮಠದಿಂದ ಕಂಕನಾಡಿ ಕರಾವಳಿ ಸರ್ಕಲ್, ಪಂಪ್ ವೆಲ್ , ಫಳ್ನೀರ್ ರಸ್ತೆ, ಕಂಕನಾಡಿ ತನಕ ರಸ್ತೆಗಳ ಎರಡು ಕಡೆ ಕಾರು ಪಾರ್ಕಿಂಗ್ ಮಾಡುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕುಂಟಿಕಾನ, ಕೊಟ್ಟಾರ ಚೌಕಿ, ಕೂಳೂರು ಹಳೆ ಸೇತುವೆ, ಬಂಟ್ಸ್ ಹಾಸ್ಟೆಲ್, ಕರಂಗಲಪಾಡಿ, ಎಮ್ ಜಿ ರಸ್ತೆ, ಕೆಎಸ್‌ಆರ್‌ಟಿಸಿ, ನಂತೂರು, ಕೆಪಿಟಿಯಿಂದ ಪದುವ ಸ್ಕೂಲ್ — ಹೆಚ್ಚಿನ ಕಡೆ ರಸ್ತೆ ದಟ್ಟಣೆ; ಪಾರ್ಕಿಂಗ್ ಸಮಸ್ಯೆ ಇದ್ದು ಇದರಿಂದ ಬಸ್ ಸಂಚಾರಕ್ಕೆ ಅಡಚಣೆಯಾಗಿದೆ. ಇದನ್ನು ಸರಿಪಡಿಸುವಂತೆ ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾಗಿ ಅಝೀಝ್ ಪರ್ತಿಪಾಡಿ ವಿವರಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೆ. ರಾಮಚಂದ್ರ ನಾಯ್ಕ್, ಕೋಶಾಧಿಕಾರಿ ಜೊಯೆಲ್ ದಿಲ್‌ರಾಜ್ ಫೆರ್ನಾಂಡಿಸ್ ಹಾಗೂ ಜೊತೆ ಕಾರ್ಯದರ್ಶಿ ರಾಜೇಶ್ ಟಿ. ಕೂಡ ಭಾಗವಹಿಸಿದ್ದರು.