ʻಲಕ್ಕುಂಡಿಯಲ್ಲಿ ಸಾವಿರ ಕೆಜಿಯ ಚಿನ್ನದ ಶಿವಲಿಂಗ, ಒಂದು ಕ್ವಿಂಟಾಲಿನ ದೇವಿಯ ಮೂರ್ತಿ ಇದೆʼ

ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ ಪುರಾತತ್ವ ಇಲಾಖೆಯ ಉತ್ಖನನದ ವೇಳೆ ಸ್ಥಳಕ್ಕೆ ಆಗಮಿಸಿದ ಸ್ವಾಮೀಜಿ ವೇಷಧಾರಿ ಶೋಧನಾ ಸ್ಥಳದಲ್ಲಿ ಕುತೂಹಲ ಮೂಡಿಸುವ ಹೇಳಿಕೆ ನೀಡಿದ್ದಾರೆ. “ಇಲ್ಲಿ ಸಾವಿರ ಕೆಜಿ ತೂಕದ ಚಿನ್ನದ ಶಿವಲಿಂಗವಿದೆ; ಒಂದು ಕ್ವಿಂಟಲ್ ತೂಕದ ಚಿನ್ನದ ದೇವಿಯ ಮೂರ್ತಿ ಇದೆ ಅದನ್ನು ಸ್ಥಳಾಂತರಿಸಿದರೆ ಭೂಮಿಯ ಮೇಲೆ ಮಳೆಯೇ ಆಗುವುದಿಲ್ಲ” ಎಂದು ಸ್ವಾಮೀಜಿ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ವಂಶಸ್ಥನೆಂದು ಹೇಳಿಕೊಂಡ ಸ್ವಾಮೀಜಿಯ ಮಾತುಗಳು, ನಾಟಕೀಯ ವರ್ತನೆಗಳು ಸ್ಥಳೀಯರ ಗಮನವನ್ನು ಸೆಳೆದಿವೆ.

ಅಷ್ಟಕ್ಕೂ ಸುಮ್ಮನಾಗದ ಸ್ವಾಮೀಜಿ ವೇಷಧಾರಿ ಒಂದೇ ಕಾಲಿನಲ್ಲಿ ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ್ದಲ್ಲದೆ, ಉತ್ಖನನ ಮಾಡುತ್ತಿರುವ ಜಾಗದಲ್ಲಿ ಏನೂ ಇಲ್ಲ, ಅದರ ಪಕ್ಕದಲ್ಲೇ ಸಾವಿರ ಕೆಜಿ ತೂಕದ ಚಿನ್ನದ ಶಿವಲಿಂಗ ಮತ್ತು ಒಂದು ಕ್ವಿಂಟಲ್ ತೂಕದ ಚಿನ್ನದ ದೇವಿಯ ಮೂರ್ತಿ ಇದೆ’ ಎಂದು ಹೇಳಿದ್ದಾನೆ. ಆದರೆ, ಈ ವ್ಯಕ್ತಿ ಕುಡಿದು ಚಿತ್ತಾಗಿರುವಂತೆ ಕಂಡು ಬಂದ ಕಾರಣ ಗ್ರಾಮಸ್ಥರು ಆತನನ್ನು ತೀವ್ರ ತರಾಟೆಗೆ ತೆಗೆದುಕೊಂಡು ಓಡಿಸಿದ್ದಾರೆ.

ಕಲ್ಲಿನ ಆಯುಧ ಪತ್ತೆ:
ಉತ್ಖನನ ಜಾಗದಲ್ಲಿ ಶಿಲಾಯುಗದ ಕಾಲದ ಕಲ್ಲಿನ ಆಯುಧ ಪತ್ತೆಯಾಗಿದ್ದು, ಒಂದು ಭಾಗವು ಮೊಣಚಾಗಿದೆ. ಇದು ಆ ಕಾಲದ ಮಾನವರು ಬೇಟೆ ಅಥವಾ ದೈನಂದಿನ ಕಾರ್ಯಕ್ಕೆ ಬಳಸಿದ್ದ ಆಯುಧವೋ ಎಂಬುದು ಪುರಾತತ್ವ ತಜ್ಞರ ಕುತೂಹಲ. ಜೊತೆಗೆ ಒಂದು ಪ್ರಾಚೀನ ಗಂಟೆಯೂ ಪತ್ತೆಯಾಗಿದ್ದು, ಈ ಸ್ಥಳದ ಪುರಾತನ ಸಾಮಗ್ರಿಗಳ ಪೈಕಿ ಇನ್ನೂ ಅನೇಕ ರಹಸ್ಯ ವಸ್ತುಗಳು ಅಡಗಿರಬಹುದೆಂಬ ನಿರೀಕ್ಷೆ ಉಂಟಾಗಿದೆ.

ಇದಕ್ಕೆ ಮೊದಲು ಎರಡು ವಾರಗಳ ಹಿಂದೆ, ಲಕ್ಕುಂಡಿ ಗ್ರಾಮದ ಭೂಮಿ ಒಡೆಯುವ ಸಂದರ್ಭದಲ್ಲಿ ಪತ್ತೆಯಾಗಿದ್ದ ಬಂಗಾರದ ನಿಧಿ ಈ ಸ್ಥಳದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಸುಮಾರು 65 ಲಕ್ಷ ರೂ. ಮೌಲ್ಯದ ಈ ನಿಧಿಯಿಂದ ಪತ್ತೆದಾರ ಕುಟುಂಬಕ್ಕೆ ಶೇ.20ರಷ್ಟು ಹಣ ಅಂದರೆ 13 ಲಕ್ಷ ರೂ. ಹಂಚಲಾಗಿದೆ.

ಶಿವಲಿಂಗ  ಪತ್ತೆ:
ಉತ್ಖನನ ಕಾರ್ಯದ ಎರಡನೇ, ಮೂರನೇ ದಿನಗಳಲ್ಲಿ ಕೆಲವು ಶಿಲಾ ಭಾಗಗಳು ಮತ್ತು ಚಿಕ್ಕದೊಂದು ಶಿವಲಿಂಗದ ತುಂಡುಗಳು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಕುತೂಹಲ ‌ ಹೆಚ್ಚಾಗಿದೆ. ಈ ಕಾರ್ಯಾಚರಣೆ ಎರಡು ತಿಂಗಳ ಕಾಲ ನಡೆಯಲಿದೆ, ಮತ್ತು ಲಕ್ಕುಂಡಿಯ ಪ್ರತಿಯೊಂದು ತುದಿಗೂ ಪುರಾತನ ವಿಚಾರಗಳು ಎತ್ತಿಹಿಡಿಯಲು ಮುಂದಾಗಿದೆ. ಗ್ರಾಮಸ್ಥರು, ಪುರಾತತ್ವ ಶೋಧಕರು, ಹಾಗೂ ಕುತೂಹಲಿಗರ ದಂಡೇ ಇದೀಗ ಲಕ್ಕುಂಡಿಯಲ್ಲಿ ನೆರೆದಿದೆ. ವೀಕ್ಷಕರು ಎಲ್ಲರೂ ಈಗ ಈ ಸ್ಥಳದತ್ತ ನಿಲ್ಲುತ್ತಿದ್ದಾರೆ.

error: Content is protected !!