ಒಂದು ವರ್ಷದ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡ!: ಅಂತಿಮವಾಗಿ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ

ಮಂಗಳೂರು: ಸುಲಿಗೆ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯ ನೀಡಿದ್ದ ಒಂದು ವರ್ಷದ ಸಾಧಾರಣ ಕಾರಾಗೃಹ ಶಿಕ್ಷೆಯನ್ನು ಅನುಭವಿಸದೆ ತಲೆಮರಿಸಿಕೊಂಡ ಪರಿಣಾಮ, ಆರೋಪಿ ಇದೀಗ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಒಳಗಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ತೊಕ್ಕೊಟ್ಟು ಚಂಬುಗುಡ್ಡೆ, ಪೆರ್ಮನ್ನೂರು ನಿವಾಸಿ ನವೀನ್ ಸಿಕ್ವೇರಾ (52) ಶಿಕ್ಷೆಗೊಳಗಾದವನು. ಈತನ ವಿರುದ್ಧ 2011ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಸಂಖ್ಯೆ 195/2011, ಐಪಿಸಿ ಕಲಂ 392ರಡಿ ಸುಲಿಗೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು 2015ರಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆರೋಪಿ ಮಾನ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದು, ಉಚ್ಚ ನ್ಯಾಯಾಲಯವು ದಂಡ ಹೆಚ್ಚಿಸಿ ಶಿಕ್ಷೆಯನ್ನು ಒಂದು ವರ್ಷದ ಸಾಧಾರಣ ಕಾರಾಗೃಹ ಶಿಕ್ಷೆಗೆ ಇಳಿಸಿ, 15,000 ರೂ. ದಂಡ ವಿಧಿಸಿ 2022ರೊಳಗೆ ಶಿಕ್ಷೆ ಅನುಭವಿಸುವಂತೆ ಆದೇಶಿಸಿತ್ತು.

ಆದರೆ ಉಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸದೆ ಆರೋಪಿ ತಲೆಮರಿಸಿಕೊಂಡಿದ್ದು, ಇದರಿಂದಾಗಿ ನ್ಯಾಯಾಲಯವು ಈತನ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿತು. ನಂತರ ಖಚಿತ ಮಾಹಿತಿ ಮೇರೆಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ವಾರಂಟ್ ಜಾರಿ ಸಿಬ್ಬಂದಿ ಜ.14ರಂದು ಸುರತ್ಕಲ್ ಹೊನ್ನಕಟ್ಟೆಯ ಸುಪ್ರಭಾತ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಆರೋಪಿಯನ್ನು ಬಂಧಿಸಿದರು.

ಬಂಧಿತ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯವು ಹಿಂದಿನ ತೀರ್ಪಿನಂತೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿ ಅಂತಿಮ ಆದೇಶ ಹೊರಡಿಸಿದೆ.

error: Content is protected !!