ಮಂಗಳೂರು: ಕಳೆದ ಅಕ್ಟೋಬರ್‌ನಿಂದ ಎಂಸಿಎಫ್ ಕಾರ್ಖಾನೆಯ ಹೆಸರು ಮಾಯವಾಗಿದೆ. ʻಎಂಸಿಎಫ್ʼ ಎಂಬ ಐತಿಹಾಸಿಕ ಹೆಸರನ್ನು ಯಾವುದೇ ಕಾರಣಕ್ಕೂ ಬದಲಿಸಬಾರದು. ಕೂಡಲೇ ಆ ಹೆಸರನ್ನು ನಾಮಫಲಕದಲ್ಲಿ ಮರುಸ್ಥಾಪಿಸಬೇಕು. ಇದಕ್ಕೆ ಸ್ಪಂದನೆ ಸಿಗದಿದ್ದರೆ ಜಿಲ್ಲಾಧಿಕಾರಿಗಳ ಮಧ್ಯಪ್ರವೇಶಕ್ಕೆ ಆಗ್ರಹಿಸಲಾಗುವುದು. ಅಗತ್ಯವಿದ್ದರೆ ಉಸ್ತುವಾರಿ ಸಚಿವರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ, ನಾನೇ ಕಾರ್ಖಾನೆಗೆ ತೆರಳಿ ಸಾಧ್ಯವಾದರೆ ನಾಮಫಲಕವನ್ನು ತೆಗೆದುಹಾಕುತ್ತೇನೆ ಇದಕ್ಕೆ ನೀವು ಅವಕಾಶ ಕೊಡಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿʼಸೋಜಾ ಎಚ್ಚರಿಸಿದರು.

ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್(Mangalore Chemicals & Fertilisers-ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ) ಎಂಬ ಹೆಸರನ್ನು ನಾಮ ಫಲಕದಲ್ಲಿ ತಕ್ಷಣ ಮರು ಸ್ಥಾಪಿಸಬೇಕೆಂದು ಆಗ್ರಹಿಸಿ ʻಎಂಸಿಎಫ್ ಹೆಸರು ಉಳಿಸಿ ಹೋರಾಟ ಸಮಿತಿʼ ವತಿಯಿಂದ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಎಂಸಿಎಫ್ ಉಳಿವಿಗಾಗಿ ನಾನು ಹೋರಾಟ ನಡೆಸಿದ್ದೇನೆ. ಅಮೋನಿಯಾ ಕೊರತೆಯಾದಾಗ ಸದನದಲ್ಲಿ ಮಾತಾಡಿ ಕಚ್ಚಾವಸ್ತು ಕಡಿಮೆಯಾಗದಂತೆ ನೋಡಿದ್ದೇನೆ. ಅಪಘಾತದಲ್ಲಿ ನಮ್ಮವರೇ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಭಾವನಾತ್ಮಕ ಸಂಬಂಧವಿರುವ ಸಂಸ್ಥೆಯ ಹೆಸರನ್ನು ಬದಲಿಸುವುದು ತಪ್ಪು. ನಮ್ಮ ಭಾವನೆಗೆ ಧಕ್ಕೆ ತಂದರೆ ಇದನ್ನು ಸುಲಭವಾಗಿ ಬಿಡುವುದಿಲ್ಲ. ಹೋರಾಟ ಅನಿವಾರ್ಯ ಎಂದರು.
ಕುಡಿಯುವ ನೀರಿನ ಸಮಸ್ಯೆ ಇದ್ದರೂ ಇಂದಿಗೂ ಮಂಗಳೂರು ಮಹಾನಗರ ಪಾಲಿಕೆ ಈ ಕಾರ್ಖಾನೆಗೆ ನೀರು ಪೂರೈಸುತ್ತಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು ಗುತ್ತಿಗೆ ನೆಪದಲ್ಲಿ ಬದಲಿಸಿರುವುದನ್ನೂ ಉಲ್ಲೇಖಿಸಿದ ಅವರು, “ರಸ್ತೆ, ಜಾಗ ನಮ್ಮದು; ಲಾಭ ಮಾಡಿದವರು ಅವರು. ಈ ರೀತಿಯ ಹೆಸರು ಬದಲಾವಣೆಗಳನ್ನು ಒಪ್ಪಲಾಗುವುದಿಲ್ಲ” ಎಂದು ಟೀಕಿಸಿದರು.

ʻಮಂಗಳಾ ಯೂರಿಯಾʼ ಎಂಬುದು ಇಂದಿಗೂ ರೈತರಲ್ಲಿ ಬ್ರಾಂಡ್ ಹೆಸರು. ಕೊರೊನಾ ಸಂದರ್ಭ ಇವರಿಗೆ ನೀರು ಕೊಟ್ಟು ಸಹಕರಿಸಿದವರು ಮಂಗಳೂರಿನ ಜನತೆ. ರಸ್ತೆ, ಜಾಗ ನಮ್ಮದು ದುಡ್ಡು ಮಾಡಿದವರು ಅವರು. ಇವತ್ತಿಗೂ ಮಂಗಳಾ ಯೂರಿಯಾ ಅಂತ ಹೇಳಿದ್ರೆ ರೈತರಿಗೆ ಬ್ರಾಂಡ್ ನೇಮ್. ಗೋವಾದ ಝುವರಿ ಕಂಪೆನಿಯವರು ತನ್ನ ಹೆಸರಲ್ಲಿ ಯೂರಿಯಾ ಮಾಡಿದರು. ಯಾರಾದ್ರೂ ತಗೊಂಡ್ರಾ? ಬಾಗಿಲು ಮುಚ್ಚಿಲಿಲ್ವಾ? ಮಂಗಳ ನಮ್ಮ ಪ್ರಾಡಕ್ಟ್. ನಮ್ಮ ರೈತರ ಕಾರ್ಖಾನೆ. ದಿನಕ್ಕೊಂದು ಹೆಸರು ಕೊಡುವುದನ್ನು ನಾವು ಒಪ್ಪುವುದಿಲ್ಲ” ಎಂದರು.

ಎಂಸಿಎಫ್ 1971ರಲ್ಲಿ ಜಂಟಿ ಉದ್ಯಮವಾಗಿ ಸ್ಥಾಪನೆಯಾಗಿ 55 ವರ್ಷಗಳ ಇತಿಹಾಸ ಹೊಂದಿದೆ. 15 ವರ್ಷ ಸರಕಾರಿ ಹಾಗೂ 35 ವರ್ಷ ಖಾಸಗಿ ಒಡೆತನದಲ್ಲಿದ್ದರೂ ಈವರೆಗೆ ʻಎಂಸಿಎಫ್ʼ ಎಂಬ ಹೆಸರು ಬದಲಾಗಿರಲಿಲ್ಲ. ಸ್ಥಳೀಯರ ಭೂಮಿ, ನೀರು, ಪರಿಸರ ತ್ಯಾಗದ ಮೇಲೆ ನಿಂತ ಈ ಸಂಸ್ಥೆ ಮಂಗಳೂರಿನ ಅಸ್ಮಿತೆಯ ಭಾಗವಾಗಿದ್ದು, ಯುವಜನತೆಗೆ ಉದ್ಯೋಗ ನೀಡಿದ ಹೆಮ್ಮೆಯ ಸಂಕೇತವಾಗಿದೆ ಎಂದು ಅವರು ಹೇಳಿದರು.
1976ರಲ್ಲಿ ಅಮೋನಿಯಾ ಹಾಗೂ ಯೂರಿಯಾ ಉತ್ಪಾದನೆ ಆರಂಭಿಸಿದ ಎಂಸಿಎಫ್, ಹಲವು ಸಂಕಷ್ಟಗಳನ್ನು ಎದುರಿಸಿ 1996ರಲ್ಲಿ ನಷ್ಟದಲ್ಲಿರುವ ಕೈಗಾರಿಕ ಘಟಕವಾಗಿ ಘೋಷಿತವಾದರೂ, ಬ್ಯಾಂಕ್ ಸಹಕಾರದೊಂದಿಗೆ ಪುನಶ್ಚೇತನಗೊಂಡು ಲಾಭದಾಯಕ ಸಂಸ್ಥೆಯಾಗಿ ಬೆಳೆಯಿತು. 2015ರಲ್ಲಿ ಬಿರ್ಲಾ ಗುಂಪಿನ ಪಾಲಾದ ನಂತರ, ಕಳೆದ ಅಕ್ಟೋಬರ್‌ನಲ್ಲಿ Adventz ಗುಂಪು ಪಾರದೀಪ್ ಫಾಸ್ಫೇಟ್ಸ್ ಜೊತೆ ವಿಲೀನಗೊಳಿಸಿ ಎಂಸಿಎಫ್ ಹೆಸರನ್ನು ಅಳಿಸಲಾಗಿದೆ ಎಂದು ಆಕ್ಷೇಪಿಸಿದರು.
ಈ ಹಿನ್ನೆಲೆಯಲ್ಲಿ 500ಕ್ಕೂ ಹೆಚ್ಚು ಮಾಜಿ ಉದ್ಯೋಗಿಗಳು ಯಾವುದೇ ಲಾಭದ ನಿರೀಕ್ಷೆಯಿಲ್ಲದೆ ಎಂಸಿಎಫ್ ಹೆಸರನ್ನು ಉಳಿಸುವ ಹೋರಾಟಕ್ಕೆ ಮುಂದಾಗಿದ್ದಾರೆ. ಕೂಡಲೇ ಎಂಸಿಎಫ್ ಹೆಸರನ್ನು ಮರುಸ್ಥಾಪಿಸಬೇಕು. ಬೇಡಿಕೆ ಈಡೇರದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಐವಾನ್ ಡಿʼಸೋಜಾ ಎಚ್ಚರಿಸಿದರು.
ಎಂಸಿಎಫ್ ಹೆಸರು ಉಳಿಸಿ ಹೋರಾಟ ಸಮಿತಿ ಮಾಕ್ಸಿಮ್ ಆಲ್ಫ್ರೆಡ್, ಮುಹಮ್ಮದ್ ಅಲಿ, ಶಾಹುಲ್ ಹಮೀದ್, ಸುರೇಶ್ ಬಿ.ಕೆ., ಗೋಪಿನಾಥ್, ಐಸಾಕ್ ವಾಸ್ ಮತ್ತಿತರರು ಉಪಸ್ಥಿತರಿದ್ದರು.