ಟೆಹ್ರಾನ್/ವಾಷಿಂಗ್ಟನ್: 1979ರ ಇಸ್ಲಾಮಿಕ್ ಕ್ರಾಂತಿಯ ನಂತರದ ಇದೀಗ ಮತ್ತೆ ಇರಾನ್ ಕೊತ ಕೊತ ಕುದಿಯುತ್ತಿದೆ. ದೇಶಾದ್ಯಂತ ನಡೆದ ಪ್ರತಿಭಟನೆಗಳ ಬೆನ್ನಲ್ಲೇ ಕೇವಲ ವಾರಗಳ ಅವಧಿಯಲ್ಲಿ ದಮನ ಕಾರ್ಯಾಚರಣೆಯ ಕನಿಷ್ಠ 16,900ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದು, ಲಕ್ಷಾಂತರ ಜನರು ಗಾಯಗೊಂಡಿದ್ದಾರೆ. ಇದೇ ಅವಧಿಯಲ್ಲಿ 24,000ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ತಿಳಿಸಿವೆ.
![]()
ಆರ್ಥಿಕ ಕುಂದುಕೊರತೆಗಳು, ನಿರುದ್ಯೋಗ ಮತ್ತು ಜೀವನ ವೆಚ್ಚದ ಏರಿಕೆ ವಿರುದ್ಧ ಕಳೆದ ತಿಂಗಳು ಆರಂಭವಾದ ಪ್ರತಿಭಟನೆಗಳು, ಹಂತಹಂತವಾಗಿ ಮುಲ್ಲಾಗಳ ಆಡಳಿತವನ್ನು ಕೊನೆಗೊಳಿಸುವ ಘೋಷಣೆಗಳಾಗಿ ವಿಕಸನಗೊಂಡಿದ್ದವು. ಆದರೆ ಸರ್ಕಾರದ ಭದ್ರತಾ ಪಡೆಗಳು ಹಿಂಸಾತ್ಮಕ ಪ್ರತಿಕ್ರಿಯೆ, ಸಾಮೂಹಿಕ ಬಂಧನಗಳು ಹಾಗೂ ದೀರ್ಘಕಾಲದ ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯ ಮೂಲಕ ಪ್ರತಿಭಟನೆಗಳನ್ನು ಕುಗ್ಗಿಸಿವೆ. ಪರಿಣಾಮವಾಗಿ, ಬೀದಿಗಳಲ್ಲಿ ಪ್ರತಿಭಟನೆಗಳು ಬಹುತೇಕ ಕಡಿಮೆಯಾದರೂ ಅಶಾಂತಿಯ ನೆರಳು ಇನ್ನೂ ದೂರವಾಗಿಲ್ಲ.
ಸ್ಥಳೀಯ ವೈದ್ಯರು ಮತ್ತು ಆಸ್ಪತ್ರೆಗಳ ಮಾಹಿತಿಯನ್ನು ಉಲ್ಲೇಖಿಸಿರುವ ಅಂತರರಾಷ್ಟ್ರೀಯ ಮಾಧ್ಯಮಗಳ ಪ್ರಕಾರ, ಸಾವನ್ನಪ್ಪಿದವರಲ್ಲಿ ಬಹುಪಾಲು 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರು. ಭದ್ರತಾ ಪಡೆಗಳು ಮಿಲಿಟರಿ ದರ್ಜೆಯ ಶಸ್ತ್ರಾಸ್ತ್ರಗಳನ್ನು ಬಳಸಿದ್ದಾಗಿ ಆರೋಪಿಸಲಾಗಿದ್ದು, ತಲೆ, ಕುತ್ತಿಗೆ ಮತ್ತು ಎದೆಗೆ ಗುಂಡೇಟುಗಳಿಂದಾದ ಗಾಯಗಳು ಹೆಚ್ಚಾಗಿ ದಾಖಲಾಗಿವೆ. ಸಾವಿರಾರು ಜನರು ಕಣ್ಣಿನ ಗಂಭೀರ ಗಾಯಗಳಿಗೆ ಒಳಗಾಗಿದ್ದು, ಕೆಲ ಸಾವುಗಳು ರಕ್ತದ ಕೊರತೆಯಿಂದ ಸಂಭವಿಸಿದ್ದಾಗಿ ವರದಿಯಾಗಿದೆ.

ಈ ನಡುವೆ, ಇರಾನ್‌ನ ಮೇಲಿನ ಅಂತರರಾಷ್ಟ್ರೀಯ ಒತ್ತಡವೂ ಹೆಚ್ಚುತ್ತಿದೆ. ಬಂಧಿತ ಪ್ರತಿಭಟನಾಕಾರರ ಹತ್ಯೆಗಳು ಅಥವಾ ಮರಣದಂಡನೆಗಳು ಮುಂದುವರಿದರೆ ಹಸ್ತಕ್ಷೇಪದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಇರಾನ್, ಅಮೆರಿಕ ಮತ್ತು ಇಸ್ರೇಲ್ ದೇಶದ ಒಳಗಿನ ಅಶಾಂತಿಯನ್ನು ಪ್ರಚೋದಿಸುತ್ತಿವೆ ಎಂದು ಆರೋಪಿಸಿದೆ.
ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಭಾನುವಾರ ಮಾತನಾಡಿ, ಯಾವುದೇ ಯುಎಸ್ ದಾಳಿ ನಡೆದರೆ ಅದಕ್ಕೆ ಕಠಿಣ ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ಎಚ್ಚರಿಸಿದರು. ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ವಿರುದ್ಧದ ಯಾವುದೇ ಆಕ್ರಮಣವು ರಾಷ್ಟ್ರದ ವಿರುದ್ಧದ ಸಂಪೂರ್ಣ ಯುದ್ಧಕ್ಕೆ ಸಮನಾಗಿರುತ್ತದೆ ಎಂದೂ ಅವರು ಹೇಳಿದ್ದಾರೆ. ಇದೇ ವೇಳೆ, ಪ್ರತಿಭಟನೆಗಳಿಗೆ ಸಂಬಂಧಿಸಿದ ಮರಣದಂಡನೆಗಳು ಮುಂದುವರಿಯುವ ಸಾಧ್ಯತೆಯಿದೆ ಎಂಬ ಸೂಚನೆಗಳು ಆತಂಕ ಹೆಚ್ಚಿಸಿವೆ.

ಪ್ರತಿಭಟನೆಗಳ ನಡುವೆಯೇ, ಇರಾನ್‌ನ ಗಡಿಪಾರು ಮಾಡಲಾದ ಕ್ರೌನ್ ಪ್ರಿನ್ಸ್ ರೆಜಾ ಪಹ್ಲವಿ ತಮ್ಮ ಇತ್ತೀಚಿನ ವೀಡಿಯೊ ಸಂದೇಶದಲ್ಲಿ, “ಇರಾನ್‌ನಲ್ಲಿ ಇಂದು ಯುದ್ಧವು ಆಕ್ರಮಣ ಮತ್ತು ವಿಮೋಚನೆಯ ನಡುವೆ ಇದೆ. ಇರಾನಿನ ಜನರು ನನ್ನನ್ನು ಮುನ್ನಡೆಸಲು ಕರೆ ನೀಡಿದ್ದಾರೆ. ನಾನು ಇರಾನ್‌ಗೆ ಹಿಂತಿರುಗುತ್ತೇನೆ” ಎಂದು ಹೇಳಿದ್ದಾರೆ. ಅವರು ಇಸ್ಲಾಮಿಕ್ ಗಣರಾಜ್ಯದ ನೀತಿಗಳಿಂದ ನಿರ್ಣಾಯಕ ವಿರಾಮ ಹಾಗೂ “ಮುಕ್ತ ಇರಾನ್”ಗಾಗಿ ಶಾಂತಿ, ಸಮೃದ್ಧಿ ಮತ್ತು ಅಂತರರಾಷ್ಟ್ರೀಯ ಸಹಕಾರದ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.
ಇರಾನ್‌ನೊಳಗಿನ ದಮನಕ್ಕೆ ವಿರೋಧವಾಗಿ ವಿದೇಶಗಳಲ್ಲಿಯೂ ಪ್ರತಿಭಟನೆಗಳು ನಡೆದಿವೆ. ಯುನೈಟೆಡ್ ಸ್ಟೇಟ್ಸ್‌ನ ಲಾಸ್ ಏಂಜಲೀಸ್‌ನಲ್ಲಿ ಸಾವಿರಾರು ಇರಾನಿಯರು ಮೆರವಣಿಗೆ ನಡೆಸಿದರೆ, ನ್ಯೂಯಾರ್ಕ್‌ನಲ್ಲಿ ನೂರಾರು ಜನರು ಸೇರಿ ಸರ್ಕಾರದ ದಮನವನ್ನು ಖಂಡಿಸಿದ್ದಾರೆ.

ಇದೇ ವೇಳೆ, ಅಮೆರಿಕದ ಸೆನೆಟರ್ ಟೆಡ್ ಕ್ರೂಜ್, ಟೆಹ್ರಾನ್ ಆಡಳಿತದ ವಿರುದ್ಧ ಹೆಚ್ಚು ಆಕ್ರಮಣಕಾರಿ ನಿಲುವು ಅಗತ್ಯವಿದೆ ಎಂದು ಹೇಳಿದ್ದಾರೆ. ಸುಪ್ರೀಂ ನಾಯಕ ಖಮೇನಿ ನೇತೃತ್ವದ ಆಡಳಿತವನ್ನು ಕೊನೆಗೊಳಿಸಲು ವಾಷಿಂಗ್ಟನ್ “ಸಾಧ್ಯವಾದ ಎಲ್ಲಾ ಹೆಜ್ಜೆಗಳನ್ನು” ಇಡಬೇಕು ಎಂದು ಅವರು ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಮಾನವ ಹಕ್ಕುಗಳ ಸಂಘಟನೆಗಳು ಬಿಡುಗಡೆ ಮಾಡಿರುವ ಅಂಕಿಅಂಶಗಳು ಸರ್ಕಾರ ನೀಡಿರುವ ಮಾಹಿತಿಗಿಂತ ಬಹಳ ಹೆಚ್ಚಿನದಾಗಿದ್ದು, ಈ ಅಶಾಂತಿಯನ್ನು ದಶಕಗಳಲ್ಲಿ ಇರಾನ್ ಕಂಡ ಅತ್ಯಂತ ಭೀಕರ ಆಂತರಿಕ ಹಿಂಸಾಚಾರವೆಂದು ವರ್ಣಿಸುತ್ತಿವೆ. ಖಮೇನಿ ಅವರು ಸಾವಿರಾರು ಜನರು ಸಾವನ್ನಪ್ಪಿದ್ದಾರೆ ಎಂದು ಒಪ್ಪಿಕೊಂಡಿದ್ದರೂ, ಈ ಹಿಂಸಾಚಾರಕ್ಕೆ ವಿದೇಶಿ ಬೆಂಬಲಿತ ಗಲಭೆಕೋರರು ಕಾರಣವೆಂದು ಆರೋಪಿಸಿದ್ದಾರೆ.