ನವಿ ಮುಂಬಯಿ: ಮುಂಬೈ ಇಂಡಿಯನ್ಸ್-ಯುಪಿ ವಾರಿಯರ್ಸ್ ತಂಡಗಳು ವನಿತಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಮರು ಮುಖಾಮುಖೀಯಾಗಲಿದ್ದು, ಇಂದಿನ(ಜ.17) ಅಪರಾಹ್ನದ ಪಂದ್ಯದಲ್ಲಿ ಈ ತಂಡಗಳು ಸೆಣಸಲಿವೆ. ಹಾಗೆಯೇ ರಾತ್ರಿ ಆರ್‌ಸಿಬಿ-ಡೆಲ್ಲಿ ಮೊದಲ ಬಾರಿಗೆ ಎದುರಾಗಲಿವೆ.

ಮುಂಬೈ-ಯುಪಿ ಯ ಮೊದಲ ಮುಖಾಮುಖಿಯಲ್ಲಿ ಯುಪಿ ವಾರಿಯರ್ಸ್ 7 ವಿಕೆಟ್ ಅಂತರದಿಂದ ಗೆಲ್ಲುವ ಮೂಲಕ ಖಾತೆ ತೆರೆದಿತ್ತು. ಮುಂಬೈ 2ನೇ ಸೋಲನುಭವಿಸಿತ್ತು.

ಸಾಮಾನ್ಯವಾಗಿ 180ರ ಸರಾಸರಿ ಯಲ್ಲಿ ರನ್ ದಾಖಲಾಗುವ “ಡಾ| ಡಿ.ವೈ. ಪಾಟೀಲ್ ಸ್ಟೇಡಿಯಂ’ನಲ್ಲಿ ಮುಂಬೈಯನ್ನು ಯುಪಿ 161ಕ್ಕೆ ಹಿಡಿದು ನಿಲ್ಲಿಸಿತ್ತು. ಬಳಿಕ ಯುಪಿ 18.1 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 162 ರನ್ ಬಾರಿಸಿ ಮೊದಲ ಗೆಲುವಿನ ಸಂಭ್ರಮ ಆಚರಿಸಿತ್ತು. ಡೆಲ್ಲಿ ಎದುರಿನ ಹಿಂದಿನ ಪಂದ್ಯದಲ್ಲಿ “ರಿಟೈರ್ಡ್ ಹರ್ಟ್’ ಆಗಲ್ಪಟ್ಟಿದ್ದ ಹಲೀನ್ ದೇವಲ್ ಇಲ್ಲಿ ಅಜೇಯ 64 ರನ್ ಬಾರಿಸಿ (39 ಎಸೆತ, 12 ಬೌಂಡರಿ) ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದುದನ್ನು ಮರೆಯುವಂತಿಲ್ಲ.

ಮೆಗ್ ಲ್ಯಾನಿಂಗ್ ನಾಯಕತ್ವದ ಯುಪಿ ವಿಶ್ವ ದರ್ಜೆಯ ಆಟಗಾರ್ತಿಯರನ್ನು ಒಳಗೊಂಡಿರುವ ತಂಡ. ದೀಪ್ತಿ ಶರ್ಮ, ಎಕ್ಲ್ ಸ್ಟೋನ್, ಲಿಚ್ ಫೀಲ್ಡ್, ಹರ್ಲಿನ್; ಬೌಲಿಂಗ್ ವಿಭಾಗದಲ್ಲಿ ಕ್ರಾಂತಿ ಗೌಡ್, ಶಿಖಾ ಪಾಂಡೆ ಅವರನ್ನು ಒಳಗೊಂಡಿದೆ.
ಮುಂಬೈ ಈವರೆಗೆ ಮಿಶ್ರ ಫಲಿತಾಂಶ ಕಂಡ ತಂಡ. ನಾಲ್ಕರಲ್ಲಿ ಎರಡನ್ನು ಗೆದ್ದು, ಎರಡರಲ್ಲಿ ಸೋತಿದೆ. ನಾಯಕಿ ಕೌರ್, ಅನಾರೋಗ್ಯದಿಂದ ಒಂದು ಪಂದ್ಯದ ವಿಶ್ರಾಂತಿ ಪಡೆದು ಆಡಲಿಳಿದ ಆಲ್ರೌಂಡರ್ ನ್ಯಾಟ್ ಸ್ಕಿವರ್ ಬ್ರಂಟ್, ನಿಕೋಲಾ ಕ್ಯಾರಿ ಅವರೆಲ್ಲ ಮುಂಬೈಯ ಪ್ರಮುಖ ಆಟಗಾರ್ತಿಯರು.