ಪಾವಗಡ: ಬೈಕ್ ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟು, ಮತ್ತೊರ್ವನ ಸ್ಥಿತಿ ಗಂಭೀರವಾದ ಘಟನೆ ಇಂದು(ಜ.17) ನಡೆದಿದೆ.

ಪಾವಗಡ ಪಟ್ಟಣದ ಕನುಮನಕೆರೆಯ ನಾಗಮ್ಮ- ಈರದಾಸಪ್ಪ ದಂಪತಿಯ ಪುತ್ರ ಅಂಬರೀಶ್ (25) ಮೃತ ಯುವಕ. ಭಾಸ್ಕರ್ ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ತುಮಕೂರಿಗೆ ರವಾನಿಸಲಾಗಿದೆ.

ಅಂಬರೀಶ್ ಹಾಗೂ ಭಾಸ್ಕರ್ ಅವರು ಪಾವಗಡದಿಂದ ಮಧುಗಿರಿ ಕಡೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಎದುರಿಗೆ ಬಂದ ಟಿಪ್ಪರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಾವಗಡ ತಾಲೂಕಿನ ರಾಜವಂತಿ ಸಮೀಪದ ಬಾರ್ ವೊಂದರ ಸಮೀಪ ಈ ಘಟನೆ ಸಂಭವಿಸಿದೆ.
ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕುಟುಂಬದ ಸದಸ್ಯರು, ಸ್ನೇಹಿತರು ಪೋಲಿಸರ ವಿರುದ್ದ ಪ್ರತಿಭಟನೆ ನಡೆಸಿ, ಪೋಲಿಸರು ಗುತ್ತಿಗೆದಾರರು ಪರವಾಗಿದ್ದು ನಮಗೆ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.