ಮಂಗಳೂರು: ಕರ್ನಾಟಕದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡಗಳಲ್ಲಿನ ಪೃಕ್ರತಿ ಸೌಂದರ್ಯ ಸವಿಯಲು ಪ್ರವಾಸಿಗರು ಸಾಲುಗಟ್ಟಿ ನಿಲ್ಲುತ್ತಾರೆ. ಅದರಲ್ಲಿಯೂ ದೂರದ ಊರಿನಿಂದ ಬರುವವರು ಇಲ್ಲಿನ ಬೆಟ್ಟ, ಗುಡ್ಡಗಳ ಚಾರಣ ಮಾಡುವವರೇ ಹೆಚ್ಚು. ಆದರೆ ಇದೀಗ ಅರಣ್ಯ ಇಲಾಖೆಯು ಪ್ರವಾಸಿಗರಿಗೆ ಬಿಗ್ ಶಾಕ್ ನೀಡಿದೆ… ಕಾಡ್ಗಿಚ್ಚು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಸಾರ್ವಜನಿಕರು, ಪ್ರವಾಸಿಗರು ಮತ್ತು ಚಾರಣಿಗರ ಸುರಕ್ಷತೆಯ ದೃಷ್ಟಿಯಿಂದ ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯ ಹಲವಾರು ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಲ್ಲಿ ಚಾರಣವನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದಾರೆ.



ಬೇಸಿಗೆ ಸಮೀಪಿಸುತ್ತಿರುವ ಕಾರಣ ಕಾಡ್ಗಿಚ್ಚಿನ ಭೀತಿಯಿಂದಾಗಿ ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರುವ 11 ಪ್ರಮುಖ ಚಾರಣ ಪಥಗಳಿಗೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ) ಹೊರಡಿಸಿರುವ ಆದೇಶದ ಪ್ರಕಾರ, ಜನವರಿ 14, 2026 ರಿಂದ ಮುಂದಿನ ಆದೇಶದವರೆಗೆ ಈ ನಿಷೇಧ ಇರಲಿದೆ ಎಂದು ತಿಳಿಸಲಾಗಿದೆ.


ಯಾವೆಲ್ಲಾ ಟ್ರೆಕ್ಕಿಂಗ್ ಪಾಯಿಂಟ್ಸ್‌ಗೆ ನಿಷೇಧ?
1.ಕುದುರೆಮುಖ ಚಾರಣ
2.ಕೊಡಚಾದ್ರಿ – ಹಿಡ್ಲುಮನೆ
3.ಕೊಡಚಾದ್ರಿ – ವಳೂರು
4.ವಾಲಿಕುಂಜ ಚಾರಣ – ಕೆರ್ವಾಶೆ
5.ಕುರಿಂಜಾಲು ಚಾರಣ
6.ಬಂಡಾಜೆ – ವೊಳಂಬ್ರ
7.ಗಂಗಡಿಕಲ್ ಚಾರಣ
8.ನೇತ್ರಾವತಿ ಚಾರಣ
9.ನರಸಿಂಹ ಪರ್ವತ – ಮಳಂದೂರು
10.ವಾಲಿಕುಂಜ ಚಾರಣ – ಎಸ್. ಕೆ. ಬಾರ್ಡರ್
11.ನರಸಿಂಹ ಪರ್ವತ – ಕಿಗ್ಗ
ಇನ್ನು, ಈ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಪ್ರಚಾರ ನೀಡಲು ಸೂಚನಾ ಫಲಕಗಳನ್ನು ಅಳವಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಪ್ರವೇಶ ನಿಷೇಧಿಸಿರುವ ಜಾಗಗಳಲ್ಲಿ ಕಾವಲುಗಾರರನ್ನು ಸಹ ನೇಮಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.