ಉಳ್ಳಾಲ: ಉಳ್ಳಾಲ ಜುಮಾ ಮಸೀದಿ (402) ಹಾಗೂ ಸಯ್ಯದ್ ಮದನಿ ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷ ಬಿ.ಜಿ. ಹನೀಫ್ ಮತ್ತು ಇತರ ಪದಾಧಿಕಾರಿಗಳ ವಿರುದ್ಧ ಭ್ರಷ್ಟಾಚಾರ, ವಕ್ಸ್ ಬೈಲಾ ಉಲ್ಲಂಘನೆ, ದುರಾಡಳಿತ ಮತ್ತು ಹಣದ ಅವ್ಯವಹಾರದಂತಹ ಗಂಭೀರ ಆರೋಪಗಳು ಕೇಳಿಬಂದಿವೆ ಎಂದು ಆಡಳಿತ ಸಮಿತಿಯ ಸದಸ್ಯ ಫಾರೂಕ್ ಯು.ಹೆಚ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಆಡಳಿತ ಸಮಿತಿಯ ಹೆಚ್ಚಿನ ಸದಸ್ಯರು ಜಿಲ್ಲಾ ಹಾಗೂ ರಾಜ್ಯ ವಕ್ಸ್ ಮಂಡಳಿಗೆ ಹಲವು ಬಾರಿ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗೌರವಾನ್ವಿತ ಕರ್ನಾಟಕ ಹೈಕೋರ್ಟ್‌ನಲ್ಲಿ (W.P. No.15530/2025 – GM WAKF) ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಪೀಠವು 03-12-2025 ರಂದು ಮಹತ್ವದ ಆದೇಶ ನೀಡಿದೆ.

ಹೈಕೋರ್ಟ್ ತನ್ನ ಆದೇಶದಲ್ಲಿ, ಉಳ್ಳಾಲ ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಹಾಗೂ ಮತಯಾಚನೆಗೆ ಸಂಬಂಧಿಸಿ 30 ದಿನಗಳೊಳಗೆ ಕ್ರಮ ಕೈಗೊಳ್ಳಬೇಕು, ದೂರುಗಳ ಬಗ್ಗೆ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ ಜಿಲ್ಲಾ ವಕ್ಸ್ ಅಧಿಕಾರಿ ಅಬೂಬಕ್ಕರ್ ವಿರುದ್ಧ ರಾಜ್ಯ ವಕ್ಸ್ ಮಂಡಳಿಯ ಸಿಇಒ ತನಿಖೆ ನಡೆಸಿ ಅಗತ್ಯವಿದ್ದಲ್ಲಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಸೂಚಿಸಿದೆ.
ಈ ಆದೇಶದ ಬಳಿಕ ಭ್ರಷ್ಟಾಚಾರ ತನಿಖೆ ಎದುರಾಗುವ ಭಯದಿಂದ ಅಧ್ಯಕ್ಷ ಬಿ.ಜಿ. ಹನೀಫ್, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಉಪಾಧ್ಯಕ್ಷ ಅಶ್ರಫ್ ಅಹ್ಮದ್ ಹಾಗೂ ಕೋಶಾಧಿಕಾರಿ ನಾಝಿಂ ರೆಹಮಾನ್ ಅವರುಗಳು 06-01-2026ರಂದು ಸಮಿತಿಯ ಎಲ್ಲ ಸದಸ್ಯರಿಗೆ ಮಾಹಿತಿ ನೀಡದೇ, ಕೆಲವರನ್ನಷ್ಟೇ ಸೇರಿಸಿ ಅನಧಿಕೃತ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ 18-01-2026ರಂದು ಮಹಾಸಭೆ ಕರೆಯಲು ತೀರ್ಮಾನಿಸಲಾಗಿದೆ ಎಂದು ಫಾರೂಕ್ ಯು.ಹೆಚ್ ಆರೋಪಿಸಿದರು.
ವಕ್ಸ್ ಬೈಲಾ ಪ್ರಕಾರ ಈ ರೀತಿ ಅವಧಿಪೂರ್ವವಾಗಿ ಮಹಾಸಭೆ ಕರೆಯಲು ಯಾವುದೇ ಕಾನೂನು ಅವಕಾಶವಿಲ್ಲ. ಆಡಳಿತ ಸಮಿತಿಯ ಅವಧಿ 2026ರ ಮಾರ್ಚ್‌ನಲ್ಲಿ ಪೂರ್ಣಗೊಳ್ಳಲಿದ್ದು, ಅದಕ್ಕೂ ಮೊದಲು ಮತದಾರರ ಪಟ್ಟಿಯನ್ನು ಪರಿಷ್ಕರಿಸದೇ, ಸಾವಿರಾರು ಅರ್ಹ ಮತದಾರರನ್ನು ಮತದಾನದಿಂದ ವಂಚಿಸುವ ಸಂಚು ನಡೆಯುತ್ತಿದೆ ಎಂದು ಅವರು ಹೇಳಿದರು.
ಉಳ್ಳಾಲ ದರ್ಗಾ ಮತ್ತು ಮಸೀದಿ ವ್ಯಾಪ್ತಿಯಲ್ಲಿ ಸರ್ಕಾರದ ಅನುದಾನದಿಂದ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಡೆದ ಕಾಮಗಾರಿಗಳ ಲೆಕ್ಕಪತ್ರಗಳನ್ನು ಸಮಿತಿಗೆ ಹಾಗೂ ಸರ್ಕಾರಕ್ಕೆ ಸಲ್ಲಿಸಿಲ್ಲ. ಕಳೆದ ಮೂರು ವರ್ಷಗಳಿಂದ ಲೆಕ್ಕ ಪರಿಶೋಧಕರ ವರದಿಯನ್ನೂ ಮಂಡಿಸಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಈ ಎಲ್ಲಾ ಕಾರಣಗಳಿಂದ 18-01-2026ರಂದು ಕರೆಯಲಾಗಿರುವ ಮಹಾಸಭೆಯನ್ನು ತಕ್ಷಣ ರದ್ದುಗೊಳಿಸಬೇಕು ಹಾಗೂ ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ರಾಜ್ಯ ವಕ್ಸ್ ಮಂಡಳಿಗೆ ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಉಳ್ಳಾಲ ದರ್ಗಾ ಸಮಿತಿಯ ಸದಸ್ಯರಾದ ಯು. ಹಸೈನಾರ್, ಮೊದಿನ್ ಹಸನ್, ರಿಯಾಝ್, ಮುಸ್ತಾಫ, ಫಾರೂಕ್ (ಕಲ್ಲಾಪು), ಫಾರೂಕ್ (ಮುಕ್ಕಚೇರಿ) ಮತ್ತು ನಝೀರ್ ಕುಂಪಲ ಉಪಸ್ಥಿತರಿದ್ದರು.