ಕಾಂತಬಾರೆ ಬೂದಬಾರೆ ರಾತ್ರಿ ಬೆಳಗಾಗುವುದರೊಳಗೆ ನಿರ್ಮಿಸಿದ ಕ್ಷೇತ್ರ!
ಮಂಗಳೂರು: ಮುಲ್ಕಿ ತಾಲೂಕಿನ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಶ್ರೀ ಉಳ್ಳಾಯ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ನೇಮವು ಫೆಬ್ರವರಿ 4ರಿಂದ 10ರವರೆಗೆ ಭಕ್ತಿಭಾವದಿಂದ ನಡೆಯಲಿದೆ ಎಂದು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಿ.ಬಿ. ಕರ್ಕೇರ ಅವರು ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತಿಹಾಸ ಪ್ರಸಿದ್ಧ ಕಾಂತಾಬಾರೆ ಬೂದಾಬಾರೆಯರು ರಾತ್ರಿ ಬೆಳಗಾಗುವುದರೊಳಗೆ ಕೈಯಾರೆ ನಿರ್ಮಿಸಿದ ಈ ಕ್ಷೇತ್ರ ಸಸಿಹಿತ್ಲುವಿನ ಕಡಲತಡಿಯ ಪ್ರಕೃತಿ ರಮ್ಯ ಪ್ರದೇಶದಲ್ಲಿದ್ದು, ಭಗವಂತ ಈಶ್ವರನು ಕಿರಾತ ರೂಪದಲ್ಲಿ ನೆಲೆ ನಿಂತನೆಂಬ ಐತಿಹಾಸಿಕ ನಂಬಿಕೆ ಹೊಂದಿದೆ. ಇತರ ಪರಿವಾರ ಶಕ್ತಿಗಳೊಂದಿಗೆ ಉಳ್ಳಾಯನಾಗಿ ಇಲ್ಲಿ ಸೇವೆ ಸ್ವೀಕರಿಸುತ್ತಿರುವ ದೈವಗಳ ಜೀರ್ಣೋದ್ಧಾರದ ಬಹುಕಾಲದ ಕನಸು ಇದೀಗ ನನಸಾಗಿದೆ ಎಂದರು.
ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರದಲ್ಲಿ ಹಿಂದಿನ ಜೀರ್ಣೋದ್ಧಾರದ ವೇಳೆ ವಾಸ್ತುಬದ್ಧವಾಗಿ ಕಂಡುಬಂದ ನ್ಯೂನತೆಗಳ ಹಿನ್ನೆಲೆಯಲ್ಲಿ, ದೈವಗಳ ಅಭಯದಂತೆ ಗರೋಡಿ ಮರುನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಉಳ್ಳಾಯ, ಓಡ್ಯಂತಾಯ ಹಾಗೂ ಪರಿವಾರ ಶಕ್ತಿಗಳಿಗೆ ಪ್ರಧಾನ ಆಲಯದ ಜೊತೆಗೆ ಕಾಂತಾಬಾರೆ ಬೂದಾಬಾರೆಯರಿಗೆ ಪ್ರತ್ಯೇಕ ಶಿಲಾಮಯ ಗುಡಿಯನ್ನೂ ನಿರ್ಮಿಸಲಾಗಿದೆ ಎಂದು ವಿವರಿಸಿದರು.

ಸುಮಾರು ₹3.5 ಕೋಟಿ ಅಂದಾಜು ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಪೂರ್ವ ದಿಕ್ಕಿನ ಶಿಥಿಲಗೊಂಡ ಗೋಪುರ ಮರುನಿರ್ಮಾಣಗೊಳ್ಳುತ್ತಿದ್ದು, ಬಾರೆಯರು ಬರಿಗೈಯಲ್ಲಿ ತೋಡಿದ್ದರೆಂಬ ಪ್ರತೀತಿ ಇರುವ ಬಾವಿಯ ನವೀಕರಣ, ಅಂಗಣಕ್ಕೆ ಇಂಟರ್‌ಲಾಕ್ ವ್ಯವಸ್ಥೆ, ಆವರಣಗೋಡೆ ಹಾಗೂ ಪಡುದಿಕ್ಕಿನಲ್ಲಿ ನೂತನ ಪ್ರವೇಶದ್ವಾರ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ ಎಂದು ಹೇಳಿದರು.
ಫೆ.4ರಿಂದ ಋತ್ವಿಜರ ಉಪಸ್ಥಿತಿಯಲ್ಲಿ ಸರ್ವ ವೈದಿಕ ವಿಧಿವಿಧಾನಗಳು, ನಿತ್ಯ ಭಜನೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ ವೇಳೆ ಗಣ್ಯರು ಹಾಗೂ ದಾನಿಗಳ ಸಮ್ಮುಖದಲ್ಲಿ ಸಭಾ ಕಾರ್ಯಕ್ರಮಗಳೊಂದಿಗೆ ತುಳು ನಾಟಕ, ನೃತ್ಯ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.8ರಂದು ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ, ಫೆ.9ರಂದು ನೇಮ ನಡೆಯಲಿದೆ ಎಂದು ಸಿ.ಬಿ. ಕರ್ಕೇರ ಮಾಹಿತಿ ನೀಡಿದರು.

ಬ್ರಹ್ಮಕಲಶೋತ್ಸವದ ಯಶಸ್ಸಿಗಾಗಿ ವಿವಿಧ ಉಪಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲಾ ಸಮಿತಿಗಳು ಸಕ್ರಿಯವಾಗಿ ಸಿದ್ಧತೆಗಳಲ್ಲಿ ತೊಡಗಿವೆ. ಪ್ರಕೃತಿ ರಮ್ಯ ಪ್ರದೇಶದಲ್ಲಿರುವ ಈ ಕ್ಷೇತ್ರವನ್ನು ಭವಿಷ್ಯದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಕಾರದಿಂದ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿವೇತನ ವಿತರಣೆ, ಅಶಕ್ತರಿಗೆ ವೈದ್ಯಕೀಯ ನೆರವು ಯೋಜನೆಗಳು ಹಾಗೂ ಕಾಂತಾಬಾರೆ ಬೂದಾಬಾರೆಯರ ಹೆಸರಿನಲ್ಲಿ ವ್ಯಾಯಾಮ ಶಾಲೆ ಸ್ಥಾಪಿಸುವ ಯೋಜನೆಯೂ ಇದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪರಮಾನಂದ ವಿ. ಸಾಲ್ಯಾನ್, ಆಡಳಿತ ಸಮಿತಿ ಅಧ್ಯಕ್ಷ ಜಗನ್ನಾಥ ಆರ್. ಕೋಟ್ಯಾನ್, ಮುಂಬೈ ಸಮಿತಿಯ ಅಧ್ಯಕ್ಷ ಸತೀಶ್ ಎನ್. ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ದಿನೇಶ್ ಸಿ. ಸಾಲ್ಯಾನ್, ಆಡಳಿತ ಸಮಿತಿ ಉಪಾಧ್ಯಕ್ಷ ಅನಿಲ್ ಪೂಜಾರಿ, ಸಂಚಾಲಕ ಪದ್ಮನಾಭ ಸಸಿಹಿತ್ಲು, ಮಾಧ್ಯಮ ಸಂಚಾಲಕ ಯಶೋದರ ಕೋಟ್ಯಾನ್, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಶ್ರೀಧರ ವಿ. ಸುವರ್ಣ, ಸಮಿತಿಯ ಪ್ರಮೋದ್ ಕೋಟ್ಯಾನ್, ಜಗದೀಶ್ ಅಂಚನ್ ಉಪಸ್ಥಿತರಿದ್ದರು.