ಶಬರಿಮಲೆ: ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ದೇವಸ್ವಂ ಜಾಗೃತ ದಳ(ವಿಜಿಲೆನ್ಸ್)ದ ತಂಡವು ಇಬ್ಬರು ತಾತ್ಕಾಲಿಕ ನೌಕರರನ್ನು ಬಂಧಿಸಿದೆ.
ಬಂಧಿತ ಆರೋಪಿಗಳನ್ನು ಆಲಪ್ಪುಳ ಮೂಲದವರಾದ ಸುನಿಲ್ ಜಿ. ನಾಯರ್(51) ಹಾಗೂ ಗೋಪಕುಮಾರ್ ಎಂ.ಜಿ.(51) ಎಂದು ಗುರುತಿಸಲಾಗಿದೆ. ಬುಧವಾರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳವಾರ ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ನಡೆಸಿದ ನಿಯಮಿತ ತಪಾಸಣೆಯ ಸಂದರ್ಭದಲ್ಲಿ ಈ ಕಳ್ಳತನ ಬೆಳಕಿಗೆ ಬಂದಿದೆ. ಶಬರಿಮಲೆ ಹುಂಡಿಯಲ್ಲಿ ಕರ್ತವ್ಯ ಮುಗಿಸಿ ಹೊರಡುತ್ತಿದ್ದ ವೇಳೆ ಅಧಿಕಾರಿಗಳು ಇಬ್ಬರನ್ನೂ ತಡೆದು ತಪಾಸಣೆ ನಡೆಸಿದ್ದಾರೆ.
ತಪಾಸಣೆಯ ವೇಳೆ ಆರೋಪಿಗಳು ತಮ್ಮ ಬಾಯಿಯಲ್ಲಿ ಕರೆನ್ಸಿ ನೋಟುಗಳನ್ನು ಅಡಗಿಸಿಕೊಂಡಿರುವುದು ಕಂಡುಬಂದಿದೆ. ಇದರಿಂದ ಅನುಮಾನಗೊಂಡ ಅಧಿಕಾರಿಗಳು ಹೆಚ್ಚಿನ ಪರಿಶೀಲನೆ ನಡೆಸಿದಾಗ, ಅವರ ಬಳಿ ಹೆಚ್ಚಿನ ಪ್ರಮಾಣದ ಭಾರತೀಯ ಹಾಗೂ ವಿದೇಶಿ ಕರೆನ್ಸಿಗಳು ಪತ್ತೆಯಾಗಿವೆ ಎಂದು ಸನ್ನಿಧಾನಂ ಎಸ್ಐ ವಿಷ್ಣು ವಿ. ಅವರು ಮಾಹಿತಿ ನೀಡಿದ್ದಾರೆ.
ಸುನಿಲ್ ಜಿ. ನಾಯರ್ ಅವರಿಂದ ಜಾಗೃತ ದಳದ ಅಧಿಕಾರಿಗಳು €20, ಕೆನಡಾದ $5 ಮತ್ತು ಯುಎಇ ದಿರ್ಹಮ್ 50 ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಗೋಪಕುಮಾರ್ ಅವರಿಂದ ಮಲೇಷಿಯಾದ 50 ಮತ್ತು 100 ರಿಂಗಿಟ್ ನೋಟುಗಳು ಹಾಗೂ ₹500 ನೋಟು ವಶಕ್ಕೆ ಪಡೆಯಲಾಗಿದೆ.
ಪ್ರಕರಣ ಪತ್ತೆಯಾದ ಬಳಿಕ, ತಿರುವಾಂಕೂರು ದೇವಸ್ವಂ ವಿಜಿಲೆನ್ಸ್ ಉಪನಿರೀಕ್ಷಕರು ಆರೋಪಿಗಳು ತಂಗಿದ್ದ ಸ್ಥಳದಲ್ಲಿ ಶೋಧ ನಡೆಸಿದ್ದಾರೆ. ಈ ವೇಳೆ ಸುನಿಲ್ ಅವರ ಬ್ಯಾಗ್‌ನಿಂದ ₹500ರ 50 ನೋಟುಗಳು, €10ರ 2 ನೋಟುಗಳು, €20ರ 4 ನೋಟುಗಳು, €50ರ 3 ನೋಟುಗಳು, ಮ್ಯಾನ್ಮಾರ್ ಕ್ಯಾಟ್ ₹1,000ರ ಒಂದು ನೋಟು, ₹5,000ರ ಎರಡು ನೋಟುಗಳು, ಯುಎಇ 100 ದಿರ್ಹಮ್‌ನ ಎರಡು ನೋಟುಗಳು ಹಾಗೂ ಒಮಾನಿ ಕರೆನ್ಸಿಯ ತಲಾ 100 ಬೈಸಾದ ಎರಡು ನೋಟುಗಳು ವಶಪಡಿಸಿಕೊಂಡಿದ್ದಾರೆ.
ಅದೇ ರೀತಿ, ಗೋಪಕುಮಾರ್ ಅವರ ಬ್ಯಾಗ್‌ನಿಂದ ₹500ರ 27 ನೋಟುಗಳು, ₹100ರ ಎರಡು ನೋಟುಗಳು, ₹20ರ ನಾಲ್ಕು ನೋಟುಗಳು, ₹10ರ ನಾಲ್ಕು ನೋಟುಗಳು, ಸಿಂಗಾಪುರದ $50 ನೋಟು, ಮ್ಯಾನ್ಮಾರ್ ಕ್ಯಾಟ್ ₹5,000ರ ಎರಡು ನೋಟುಗಳು, ಯುಎಇ 100 ದಿರ್ಹಮ್‌ನ ಎರಡು ನೋಟುಗಳು, ಒಂದು ಮಲೇಷಿಯನ್ ರಿಂಗಿಟ್ ನೋಟು ಹಾಗೂ ಸುಮಾರು 2 ಗ್ರಾಂ ತೂಕದ ಚಿನ್ನದ ಬಣ್ಣದ ಲಾಕೆಟ್ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.