ಮಂಗಳೂರು: ರಾಜ್ಯದಲ್ಲಿ ಸುಮಾರು 18 ರಿಂದ 20 ಲಕ್ಷ ಹಾಗೂ ದೇಶದಲ್ಲಿ 9 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಕುಲಾಲ/ಕುಂಬಾರ ಸಮುದಾಯಕ್ಕೆ ರಾಜಕೀಯವಾಗಿ ಸೂಕ್ತ ಪ್ರತಿನಿಧಿತ್ವ ಸಿಗದಿರುವುದು ಅತ್ಯಂತ ದೊಡ್ಡ ಅನ್ಯಾಯ ಎಂದು ಕುಡ್ಲ ಕುಲಾಲ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಅಧ್ಯಕ್ಷ ಸದಾಶಿವ ಬಂಗೇರ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇದುವರೆಗೆ ಲಕ್ಷ್ಮೀಸಾಗರ ಒಬ್ಬರನ್ನು ಹೊರತುಪಡಿಸಿ ಕುಲಾಲ/ಕುಂಬಾರ ಸಮುದಾಯದವರಿಗೆ ಯಾವುದೇ ರಾಜಕೀಯ ಸ್ಥಾನಮಾನ ದೊರಕಿಲ್ಲ ಎಂದು ಹೇಳಿದರು. ಸಮುದಾಯದ ಜನಸಂಖ್ಯೆಯನ್ನು ಪರಿಗಣಿಸಿ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಪಕ್ಷದಲ್ಲಿರುವ ಕುಲಾಲ/ಕುಂಬಾರ ನಾಯಕರಿಗೆ ಗೌರವಯುತ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.

ಮುಂದಿನ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಕುಲಾಲ/ಕುಂಬಾರರನ್ನು ಪರಿಗಣಿಸಬೇಕು. ಅದೇ ರೀತಿ ವಿಧಾನಸಭೆ, ವಿಧಾನಪರಿಷತ್ ಹಾಗೂ ಲೋಕಸಭಾ ಚುನಾವಣೆಯಲ್ಲೂ ಸಮುದಾಯಕ್ಕೆ ನ್ಯಾಯಸಮ್ಮತ ಅವಕಾಶ ಕಲ್ಪಿಸಬೇಕೆಂದು ಅವರು ಹಕ್ಕೊತ್ತಾಯಿಸಿದರು.

ದೇವರಾಜು ಅರಸು ಅಭಿವೃದ್ಧಿ ನಿಗಮದ ಮೂಲಕ 103 ಜಾತಿಗಳಿಗೆ 600ರಿಂದ 700 ಕೋಟಿ ರೂ. ಅನುದಾನ ನೀಡುತ್ತಿರುವ ರಾಜ್ಯ ಸರ್ಕಾರ, ಕುಲಾಲ/ಕುಂಬಾರ ಸಮುದಾಯಕ್ಕೆ ಇದುವರೆಗೆ ಒದಗಿಸಿರುವ ಸವಲತ್ತುಗಳು ಅಪರ್ಯಾಪ್ತವಾಗಿವೆ ಎಂದು ಅವರು ಹೇಳಿದರು. ಆದ್ದರಿಂದ ಕುಲಾಲ/ಕುಂಬಾರರಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಮೂಲಭೂತ ಸೌಕರ್ಯಗಳೊಂದಿಗೆ ಸ್ಥಾಪಿಸಿ, ಕನಿಷ್ಠ 250 ಕೋಟಿ ರೂ. ಅನುದಾನವನ್ನು ಮೀಸಲಿಡಬೇಕು ಎಂದು ರಾಜ್ಯ ಸರ್ಕಾರವನ್ನು ವಿನಯಪೂರ್ವಕವಾಗಿ ಒತ್ತಾಯಿಸಿದರು. ಇದರಿಂದ ಸಮುದಾಯದ ಬಡ ವರ್ಗದವರು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಮಂಜಯ್ಯ ಬಿಜೈ, ರಾಜೇಂದ್ರ ಕುಮಾರ್, ಪ್ರಧಾನ ಕಾರ್ಯದರ್ಶಿ ಶೇಷಪ್ಪ ಮೂಲ್ಯ, ಕೋಶಾಧಿಕಾರಿ ವಿಶ್ವನಾಥ ಬಂಗೇರಾ ಕುಳಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.