ಅಂತೂ ಇಂತೂ ಜಾತಿಯ ಪಡಂಭೂತ ಬಿಗ್‌ಬಾಸ್ ರಿಯಾಲಿಟಿ ಶೋ ಮನೆಗೂ ಕಾಲಿಟ್ಟಿದೆ. ಧ್ರುವಂತ್ ಅವರ ಜಾತಿಯನ್ನು ಅವರು ʻಪೂಜಾರಿʼ ಎಂದು ಗೊತ್ತಾಗುತ್ತಿದ್ದಂತೆ ಒಂದಾದ ಕೆಲವು ಜಾತಿಪ್ರೇಮಿಗಳು ಧ್ರುವಂತ್ ಹೆಸರಿನ ಮುಂದೆ ʻಪೂಜಾರಿʼ ಸೇರಿಸಿ, ಈತ ʻತುಳುವ ಜವಣ್ಯೆ, ನಮ್ಮ ಊರುದ ಜವಣ್ಯೆʼ ಎಂದೆಲ್ಲಾ ಬಿಂಬಿಸಿ ಪೋಸ್ಟರ್ ಅಂಟಿಸಲಾರಂಭಿಸಿದ್ದಾರೆ. ಬಸ್‌ಗಳಲ್ಲಿ, ಗೋಡೆಗಳಲ್ಲಿ ಈ ರೀತಿಯ ಪೋಸ್ಟರ್‌ಗಳು ಅಲ್ಲಲ್ಲಿ ಪ್ರತ್ಯಕ್ಷವಾಗಲಾರಂಭಿಸಿದೆ.

ಸೋಷಿಯಲ್ ಮೀಡಿಯಾದಲ್ಲೂ ಪೂಜಾರಿ, ತುಳುವ ಹೆಸರಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ʻಜಾತಿʼ ಹಾಗೂ ʻತುಳುವʼ ಎನ್ನುವ ಟ್ರಂಪ್ ಕಾರ್ಡ್ ಬಳಸಿ ಬಿಗ್‌ಬಾಸ್ ನಲ್ಲಿ ಧ್ರುವಂತ್ ಗೆಲ್ಲಿಸಲು ಓಟು ಹಾಕಿ ಎಂದು ಅಂಗಲಾಚುತ್ತಿದ್ದಾರೆ. (ಒಂದು ವೇಳೆ ಬಿಲ್ಲವರು ಜಾತಿ ಪ್ರೇಮಿಗಳಾಗಿದ್ದರೆ ಜನಾರ್ದನ ಪೂಜಾರಿ ಇಷ್ಟು ಸೋಲುಗಳನ್ನು ಕಾಣುತ್ತಿರಲಿಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ಪದ್ಮರಾಜ್ ಪೂಜಾರಿ ಸೋಲುತ್ತಿರಲಿಲ್ಲ.)

ʻಬಂಟ ವರ್ಸಸ್ ಬಿಲ್ಲವʼ ಬಿಗ್‌ಬಾಸ್ ಮನೆಗೆ ಕಾಲಿಡಲೂ ಕಾರಣವಿದೆ. ತುಳುನಾಡಿನ ಹುಡುಗಿ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಗೆ ಹೋಗಿ ತನ್ನ ಡಿಫೆರೆಂಟ್ ಮ್ಯಾನರಿಸಂ ಮೂಲಕ ಆಟ ಆಡುತ್ತಿದ್ದಾಳೆ. ಇವಳ ಹೆಸರಿನ ಮುಂದೆ ʻಶೆಟ್ಟಿʼ ಇರುವುದರಿಂದಲೋ ಏನೋ ಕೆಲವರು ಧ್ರುವಂತ್ ತುಳುನಾಡಿನ ಹುಡುಗ ಎಂದು ಭಾವಿಸಿ, ಅವರ ಜಾತಿಯನ್ನು ಹುಡುಕಿ ಹೆಸರಿನ ಪಕ್ಕ ʻಪೂಜಾರಿʼಯನ್ನು ಸೇರಿಸಿಬಿಟ್ಟಿದ್ದಾರೆ. ರಕ್ಷಿತಾ ಶೆಟ್ಟಿ ಬಗ್ಗೆ ತುಳುನಾಡಿನ ಜನರಿಗೆ ವಿಶೇಷ ಒಲವು, ಪ್ರೀತಿ ಇರುವುದರಿಂದಲೋ ಏನೊ ಅವರ ವಿರುದ್ಧ ಜಾತಿಯನ್ನು ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ ಎನ್ನುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಹಾಗಾದರೆ ಧ್ರುವಂತ್ ದಕ್ಷಿಣಕನ್ನಡದವರಾ?
ನಿಜ ಧ್ರುವಂತ್ ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಹುಟ್ಟಿದ್ದೇನೋ ನಿಜ. ಆದರೆ ಅವರು ಬೆಳೆದಿದ್ದು ಸಂಪೂರ್ಣವಾಗಿ ಕೊಡಗಿನಲ್ಲಿ. ಧ್ರುವಂತ್ ಮೂಲ ಹೆಸರು ಚರಿತ್ ಬಾಳಪ್ಪ. ಕನ್ನಡದ ಮಧುಲಕ್ಷ್ಮಿ ಸೀರಿಯಲ್‌ನಲ್ಲಿ ಡಾ.ಧ್ರುವಂತ್ ಎಂಬ ಹೆಸರಿನ ಪಾತ್ರ ಮಾಡಿದ್ದರಿಂದ ಚರಿತ್ ಬಾಳಪ್ಪ ಹೋಗಿ, ಧ್ರುವಂತ್ ಎನ್ನುವ ಹೆಸರೇ ಶಾಶ್ವತವಾಯಿತು. ಧ್ರುವಂತ್ ಅವರು ಇದುವರೆಗೂ ಅವರು ಎಲ್ಲಿಯೂ ತನ್ನ ಜಾತಿಯನ್ನು ಹೇಳಿಕೊಂಡಿಲ್ಲ. ಕೆಲವರಿಗೆ ತನ್ನ ಜಾತಿಯನ್ನು ತೋರಿಸಲು ಇಷ್ಟವಿಲ್ಲ. ಅದವರ ವೈಯಕ್ತಿಕ ವಿಚಾರ. ಆದರೆ ಕೆಲವು ಜಾತಿ ಪ್ರೇಮಿಗಳು ಅವರ ಜಾತಿಯನ್ನು ಹುಡುಕಿಬಿಟ್ಟು ಬಂಟ ವರ್ಸಸ್ ಬಿಲ್ಲವ ಎನ್ನುವ ಟ್ರಂಪ್ ಕಾರ್ಡ್ ಬಳಸಿ, ತನ್ನ ಜಾತಿ ಪ್ರೇಮದ ಅಮಲನ್ನು ಈ ಮೂಲಕ ತೀರಿಸಿಕೊಳ್ಳುತ್ತಿದ್ದಾರೆ.

ಇದು ಧ್ರುವಂತ್ ತಪ್ಪಲ್ಲ. ಹೊರಗಡೆ ಇಷ್ಟೆಲ್ಲಾ ಹುಚ್ಚಾಟಗಳು ನಡೆಯುತ್ತದೆ ಎಂದು ಅವರಿಗೆ ಗೊತ್ತಿರಲು ಸಾಧ್ಯವಿಲ್ಲ. ಯಾರು ಚೆನ್ನಾಗಿ ಆಟ ಆಡುತ್ತಾರೋ ಗೆದ್ದು ಬರಲಿ ಎನ್ನುವುದೇ ಇಡೀ ಕರ್ನಾಟಕದ ಜನರ ಆಶಯ. ಅದರೆ ಭಾಷೆ ಹಾಗೂ ಊರಿನ ವಿಷಯ ಮುಂದೆ ಬಂದಾಗ ನಮ್ಮೂರಿನ ಸ್ಪರ್ಧಿಗಳ ಬಗ್ಗೆ ಒಲವು ಮೂಡುವುದು ಸಹಜ. ಹಾಗಾಗಿ ಇಡೀ ತುಳುನಾಡಿನ ಜನರು ವ್ಲಾಗ್ ಮಾಡುತ್ತಾ ಮನೆಮಾತಾದ, ಕಷ್ಟದಿಂದ ಮೇಲೆ ಬಂದ ರಕ್ಷಿತಾ ಶೆಟ್ಟಿ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ. ಇಲ್ಲಿ ಯಾರೂ ಕೂಡಾ ಜಾತಿ ಹುಡುಕುತ್ತಿರಲಿಲ್ಲ. ಯಾಕೆಂದರೆ ಆಕೆ ಹುಟ್ಟಿದಂದಿನಿಂದಲೇ ತನ್ನ ಹೆಸರಿನ ಮುಂದೆ ಶೆಟ್ಟಿ ಎಂದೇ ಹಾಕಿಸಿಕೊಂಡಿದ್ದಾಳೆ.

ಆಕೆ ಅಷ್ಟೊಂದು ಕಷ್ಟ ಪಟ್ಟಾಗಲೂ ಅವಳ ಜಾತಿಯವರ್ಯಾರೂ ಆಕೆಯ ನೆರವಿಗೆ ಬಂದಿರಲಿಲ್ಲ. ಆಕೆಯ ಡಿಫೆರೆಂಟ್ ಮ್ಯಾನರಿಸಂನಿಂದಲೇ ಮೇಲೆ ಬಂದಳು. ಯೂಟ್ಯೂಬ್‌ನಲ್ಲಿ ಸ್ವಲ್ಪ ಕಾಸು ಮಾಡಿಕೊಂಡಳು ಅಷ್ಟೆ. ಅದೇ ರೀತಿ ಧ್ರುವಂತ್ ಕಿರುತೆರೆಯಲ್ಲಿ ಮೇಲೆ ಬರಲು ಅವನ ಜಾತಿಯವರ್ಯಾರೂ ನೆರವಿಗೆ ಬರಲಿಲ್ಲ. ಆತನ ಪ್ರತಿಭೆಯೇ ಅವನನ್ನು ಇಷ್ಟು ಮೇಲಕ್ಕೆ ತಂದಿತು. ಆದರೆ ಈಗ ಆತ ತಮ್ಮ ಜಾತಿಯವನು ಗೊತ್ತಾಗುತ್ತಿದ್ದಂತೆ ಅವನ ಪರವಾಗಿ ಬ್ಯಾಟಿಂಗ್ ಬೀಸುತ್ತಿದ್ದಾರೆ. ಹಾಗಾದರೆ ಕಡಿಮೆ ಜಾತಿಯವರು ಏನು ಮಾಡಬೇಕು ಸ್ವಾಮಿ? ಈ ಜಾತಿ ಅಂಧಾಭಿಮಾನ ಯಾವಾಗ ಹೋಗುತ್ತದೆ? ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಹುಡುಕಿ ಹುಡುಕಿ ಕೊಲ್ಲುತ್ತಿದ್ದರೂ ಈ ಜಾತಿ ಪ್ರೇಮಿಗಳಿಗೆ ಬುದ್ಧಿಬರಲಿಲ್ಲ ಅಲ್ವಾ?

ಧ್ರುವಂತ್ ತುಳು ಹುಡುಗನಾಗಿದ್ದರೆ ಇಷ್ಟರ ತನಕ ಬಿಗ್‌ಬಾಸ್ ಮನೆಯಲ್ಲಿ ತುಳುವಲ್ಲಿ ಮಾತಾಡಿದ್ದಾನಾ? ಒಂದು ವೇಳೆ ಅವನು ತುಳುವ ಆಗಿದ್ದರೆ ಕನ್ನಡ ಮಾತಾಡಲು ಕಷ್ಟಪಡುತ್ತಿದ್ದ ರಕ್ಷಿತಾ ಶೆಟ್ಟಿ ಜೊತೆ ಒಂದು ಪದವನ್ನಾದರೂ ತುಳುವಲ್ಲಿ ಮಾತಾಡಿದ್ದಾನಾ? ಒಂದು ವಾರಗಳ ಕಾಲ ರಕ್ಷಿತಾ- ಧ್ರುವಂತ್ ಒಂದೇ ರೂಮಿನಲ್ಲಿ ಒಟ್ಟಿಗೆ ಇದ್ದರು. ಅಲ್ಲಿಯಾದರೂ ಈ ಮನುಷ್ಯ ತುಳುವಲ್ಲಿ ಮಾತಾಡಿದ್ದಾನಾ? ರಕ್ಷಿತಾಗೆ ಕೆಲವೊಂದು ಕನ್ನಡ ವಾಕ್ಯಗಳು ಅರ್ಥವಾಗದೇ ಇದ್ದಾಗ ಅದನ್ನು ಆಕೆಗೆ ಅರ್ಥ ಮಾಡಿಸಿದ್ದಾನಾ? ಅಷ್ಟಕ್ಕೂ ಧ್ರುವಂತ್‌ಗೆ ತಾನೊಬ್ಬ ತುಳುವ ಎಂದು ಹೇಳಿಕೊಳ್ಳುವ ಸ್ವಾಭಿಮಾನವಾದರೂ ಇದೆಯಾ?

ಬಿಗ್‌ಬಾಸ್‌ನಲ್ಲಿ ಯಾರು ಬೇಕಾದರೂ ಗೆದ್ದು ಬರಲಿ, ಆದರೆ ಕೆಲವೊಂದು ಪ್ರತಿಭೆಗಳು ಜಾತಿ ರಾಜಕೀಯದಿಂದ, ಪ್ರದೇಶವಾರು ಜಗಳದಿಂದ ಕಮರಿ ಹೋಗಬಾರದು ಎನ್ನುವುದಷ್ಟೇ ನಮ್ಮ ಆಶಯ. ಬೇಕಾದರೆ ಚರಿತ್ ಬಾಳಪ್ಪ ಬಿಗ್‌ಬಾಸ್‌ನಲ್ಲಿ ಗೆದ್ದು ಬಂದರೂ ಸಂತೋಷ, ರಕ್ಷಿತಾ ಗೆದ್ದು ಬಂದರೂ ಸಂತೋಷ. ಅಷ್ಟೇ ಏಕೆ ಗಿಲ್ಲಿನಟ, ರಘು ಸರ್, ಅಶ್ವಿನಿ, ಕಾವ್ಯಾ ಹೀಗೆ ಯಾರು ಬೇಕಾದರೂ ಗೆದ್ದು ಬರಲಿ. ನಮಗೆ ಸಂತೋಷವೇ.
-ಗಿರೀಶ್ ಮಳಲಿ