ಮನರೇಗಾ ಮರುಸ್ಥಾಪನೆ ತನಕ ಹೋರಾಟ: ಡಿಸಿಎಂ ಘೋಷಣೆ

ಮಂಗಳೂರು: ರಾಜ್ಯದಲ್ಲಿ ಗ್ರಾಮೀಣ ಜನರ ಜೀವನಾಧಾರವಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ)ಯನ್ನು ಕೇಂದ್ರ ಸರ್ಕಾರ ಹತ್ತಿಕ್ಕುತ್ತಿರುವುದನ್ನು ಖಂಡಿಸಿ, ಮನರೇಗಾ ಉಳಿಸಿ ಅಭಿಯಾನವನ್ನು ಜನವರಿ 26ರ ನಂತರ ರಾಜ್ಯದಾದ್ಯಂತ ಆರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪ್ರತಿ ವರ್ಷ ರಾಜ್ಯಕ್ಕೆ ಸುಮಾರು 6 ಸಾವಿರ ಕೋಟಿ ರೂ., ಪ್ರತಿ ಗ್ರಾಮ ಪಂಚಾಯ್ತಿಗೆ ಸರಾಸರಿ 1 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಅವಕಾಶ ನೀಡುತ್ತಿದ್ದ ಮನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ದುರ್ಬಲಗೊಳಿಸಿದೆ. ಇದರ ವಿರುದ್ಧ ಜನಜಾಗೃತಿ ಮೂಡಿಸಲು ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5ರಿಂದ 10 ಕಿ.ಮೀ ಪಾದಯಾತ್ರೆ ನಡೆಸಲಾಗುವುದು” ಎಂದರು.

ಮನರೇಗಾ ಉಳಿಸಿ ಅಭಿಯಾನವನ್ನು ಇಡೀ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗುವುದು. ವಿಬಿ ಜಿ ರಾಮ್ ಜಿ ಕಾಯ್ದೆ ಕುರಿತು ಚರ್ಚೆ ನಡೆಸಲು ಎರಡು ದಿನಗಳ ವಿಶೇಷ ಅಧಿವೇಶನ ಕರೆಯುವ ಆಲೋಚನೆಯೂ ಇದೆ. ಈ ಕಾಯ್ದೆಯಿಂದ ಗ್ರಾಮೀಣ ಪ್ರದೇಶದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಅವರು ಹೇಳಿದರು.

ಜನವರಿ 6ರಿಂದ ಫೆಬ್ರವರಿ 2ರವರೆಗೆ ತಾಲ್ಲೂಕು ಮಟ್ಟದಲ್ಲಿ ಪಂಚಾಯತ್ ಸದಸ್ಯರು, ಫಲಾನುಭವಿ ಕಾರ್ಮಿಕರನ್ನು ಒಳಗೊಂಡು ಪಾದಯಾತ್ರೆ ನಡೆಸಲಾಗುವುದು. ನರೇಗಾ ಯೋಜನೆಯ ಮಹತ್ವ ಹಾಗೂ ಪರಿಣಾಮಗಳ ಕುರಿತು ಪ್ರತಿಯೊಬ್ಬರಿಗೂ ಅರಿವು ಮೂಡಿಸಲಾಗುವುದು. ನರೇಗಾ ಮರುಸ್ಥಾಪನೆಯಾಗುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ಅಸ್ಸಾಂ ರಾಜ್ಯಕ್ಕೆ ಭೇಟಿ ನೀಡುವ ಕುರಿತು ಕೇಳಿದ ಪ್ರಶ್ನೆಗೆ, “ಪಕ್ಷ ನನಗೆ ನೀಡುವ ಜವಾಬ್ದಾರಿಯ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸುತ್ತೇನೆ” ಎಂದು ಉತ್ತರಿಸಿದರು.

ಎಸ್‌ಪಿ ಹಾಗೂ ಕಮಿಷನರ್ ವರ್ಗಾವಣೆ ಹಿಂದೆ ಕಾಂಗ್ರೆಸ್ ನಾಯಕರೇ ಇದ್ದಾರೆ ಎಂಬ ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, “ದಿನವೂ ಆರೋಪ ಮಾಡುತ್ತಿರಲಿ, ದಿನವೂ ನಾವು ಕೇಳುತ್ತಿರೋಣ” ಎಂದರು.

ರಾಜ್ಯಪಾಲರು ಮೂರು ಮಸೂದೆಗಳನ್ನು ವಾಪಸ್ ಕಳುಹಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಲು, “ಸಂಜೆ ಮುಖ್ಯಮಂತ್ರಿಗಳು ಬರುತ್ತಾರೆ, ಅವರ ಬಳಿ ಕೇಳಿ” ಎಂದು ಹೇಳಿದರು.

error: Content is protected !!