ಇಷ್ಟೊಂದು ಸಾಮರ್ಥ್ಯ ಇದ್ದರೂ ಕರಾವಳಿ ಏಕೆ ಹಿಂದುಳಿಯಿತು?: ಡಿಕೆಶಿಯ ಪ್ರಶ್ನೆ

ಮಂಗಳೂರು: ಸೌಂದರ್ಯ, ಜ್ಞಾನ ಮತ್ತು ಸಂಪತ್ತಿನಿಂದ ತುಂಬಿದ ಕರಾವಳಿ… ಆದರೆ ಅಭಿವೃದ್ಧಿಯ ಓಟದಲ್ಲಿ ಮಾತ್ರ ಹಿಂದೆ ಉಳಿದ ಪ್ರದೇಶ. ಇಷ್ಟೊಂದು ಸಾಮರ್ಥ್ಯ ಇದ್ದರೂ ಕರಾವಳಿ ಏಕೆ ಹಿಂದುಳಿಯಿತು ಎಂಬ ಪ್ರಶ್ನೆ ನನ್ನ ಮನಸ್ಸನ್ನು ಕಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾವನಾತ್ಮಕವಾಗಿ ಹೇಳಿದರು.

ಮಂಗಳೂರು ಅತ್ತಾವರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಕೊಡಗು ಸೇರಿ 300 ಕಿಲೋಮೀಟರ್ ಉದ್ದದ ಈ ಕರಾವಳಿ ನೆಲ ದೇಶಕ್ಕೆ ಬ್ಯಾಂಕಿಂಗ್ ವ್ಯವಸ್ಥೆ, ಶಿಸ್ತು ಮತ್ತು ಶಿಕ್ಷಣದ ಬೆಳಕು ನೀಡಿದ ನೆಲೆ. ಇದು ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಪಿಯು ಶಿಕ್ಷಣದ ಮೂಲಕ ಸಾವಿರಾರು ಕನಸುಗಳನ್ನು ರೂಪಿಸಿದ ಶಿಕ್ಷಣ ಹಬ್. ಇಂತಹ ಶಕ್ತಿ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಕಾಣುವುದಿಲ್ಲ,” ಎಂದು ಹೇಳಿದರು.

ಆದರೂ ಇಂದು ಈ ನೆಲದ ಮಕ್ಕಳು ಉದ್ಯೋಗ ಮತ್ತು ಅವಕಾಶಗಳಿಗಾಗಿ ವಿದೇಶ, ಬೆಂಗಳೂರು, ಮುಂಬೈ ಕಡೆಗೆ ವಲಸೆ ಹೋಗುತ್ತಿರುವುದು ಮನಸ್ಸಿಗೆ ನೋವು ನೀಡುತ್ತದೆ ಎಂದು ಹೇಳಿದ ಅವರು, “ನಮ್ಮ ಕಡಲತೀರಗಳು ಗೋವಾಕ್ಕಿಂತ ಕಡಿಮೆಯಲ್ಲ. ನಮ್ಮ ಪ್ರಕೃತಿ ಅಪಾರವಾಗಿದೆ. ಆದರೂ ನಾವು ಎಲ್ಲೋ ಎಡವಿದ್ದೇವೆ. ಈ ಎಡವಟ್ಟನ್ನು ಸರಿಪಡಿಸುವ ಹೊಣೆ ನಮ್ಮೆಲ್ಲರ ಮೇಲಿದೆ,” ಎಂದು ಆತಂಕ ವ್ಯಕ್ತಪಡಿಸಿದರು.

“ಕರಾವಳಿಗೆ ಹೊಸ ಉಸಿರು ನೀಡಬೇಕು. ಹೂಡಿಕೆದಾರರಿಗೆ ವಿಶ್ವಾಸ ಮೂಡಿಸಬೇಕು. ಇದಕ್ಕಾಗಿ ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಅಗತ್ಯ. ಆ ಚರ್ಚೆಯನ್ನು ಮಂಗಳೂರಿನಿಂದಲೇ ಆರಂಭಿಸುತ್ತೇವೆ,” ಎಂದು ಡಿಕೆಶಿ ದೃಢವಾಗಿ ಹೇಳಿದರು.

ಕರಾವಳಿ ಪ್ರವಾಸೋದ್ಯಮಕ್ಕೆ ಅಡ್ಡಿಯಾಗಿರುವ ಕಾನೂನು ಮತ್ತು ವ್ಯವಸ್ಥಾತ್ಮಕ ಸಮಸ್ಯೆಗಳನ್ನು ನಿವಾರಿಸಿ, ಅಭಿವೃದ್ಧಿಗೆ ದಾರಿ ತೆಗೆಯಲು ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಪಾಲುದಾರರನ್ನು ಒಳಗೊಂಡ ಕಾರ್ಯಯೋಜನೆ ರೂಪಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತ

ನಾಡಿದ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, “ಕೈಗಾರಿಕೆಗಳಿಗೆ ಕೆಐಎಡಿಬಿ ಮೂಲಕ ಭೂಸ್ವಾಧೀನ ಮಾಡಿ ಮೂಲಸೌಕರ್ಯ ಒದಗಿಸುವಂತೆ, ಪ್ರವಾಸೋದ್ಯಮಕ್ಕೂ ಅದೇ ಮಾದರಿ ಅನುಸರಿಸಬೇಕು. ಬೀಚ್ ಮತ್ತು ನದಿ ಪ್ರವಾಸೋದ್ಯಮಕ್ಕೆ ಭೂಸ್ವಾಧೀನ ಮಾಡಿದರೆ ಹೂಡಿಕೆದಾರರು ಮುಂದೆ ಬರುತ್ತಾರೆ. ಪ್ರವಾಸೋದ್ಯಮವನ್ನು ಕೈಗಾರಿಕೆಯಾಗಿ ಪರಿಗಣಿಸುವ ಕಾಲ ಬಂದಿದೆ,” ಎಂದು ಹೇಳಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಶಾಸಕ ಸುನಿಲ್ ಕುಮಾರ್ ಮಾತನಾಡಿದರು. ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಕೆ.ವಿ. ತಿಲೋಕಚಂದ್ರ, “ಕರಾವಳಿಯ ಮೂರು ಜಿಲ್ಲೆಗಳನ್ನು ಬಹು ಉತ್ಪನ್ನ ಪ್ರವಾಸೋದ್ಯಮ ಗಮ್ಯಸ್ಥಾನಗಳಾಗಿ ರೂಪಿಸುವ ಅಪಾರ ಸಾಧ್ಯತೆ ಇದೆ,” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮೀನುಗಾರಿಕಾ ಸಚಿವ ಮಂಕಾಳ ವೈದ್ಯ, ಸಂಸದರು ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ್ ಪೂಜಾರಿ, ಶಾಸಕರು ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಯಶಪಾಲ್ ಸುವರ್ಣ, ಸುರೇಶ್ ಕುಮಾರ್, ಕಿಶೋರ್ ಕುಮಾರ್, ಕಿರಣ್ ಕೊಡ್ಗಿ, ಸತೀಶ್ ಶೈಲ್, ಐವನ್ ಡಿಸೋಜ, ರಾಜೇಗೌಡ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಹಾಗೂ ವಿವಿಧ ನಿಗಮ–ಮಂಡಳಿಗಳ ಅಧ್ಯಕ್ಷರಾದ ಎಂ.ಎ. ಗಫೂರ್, ಶಾಲೆಟ್ ಪಿಂಟೋ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಪ್ರವಾಸೋದ್ಯಮ ಇಲಾಖೆಯ ಆಯುಕ್ತ ಅಕ್ರಮ್ ಪಾಷಾ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!