ಮಂಗಳೂರು: ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಕಾಂಗ್ರೆಸ್ ಪಕ್ಷ ಅಪಪ್ರಚಾರ ನಡೆಸುತ್ತಿದೆ ಎಂದು ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “2006ರಿಂದ ಗ್ರಾಮೀಣ ಭಾಗಗಳಲ್ಲಿ ಅಭಿವೃದ್ಧಿಯ ಆದ್ಯತೆಗಳು ಬದಲಾಗಿವೆ. ವಿಕಸಿತ್ ಭಾರತ್ ಯೋಜನೆಯ ಭಾಗವಾಗಿ ಜಾರಿಯಲ್ಲಿರುವ ಜಿ.ರಾಮ್ ಜಿ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಬಡವರಿಗೆ ಹಿಂದಿನ 100 ದಿನಗಳ ಬದಲಾಗಿ ಈಗ 125 ದಿನಗಳ ಉದ್ಯೋಗಾವಕಾಶ ಒದಗಿಸಲಾಗುತ್ತಿದೆ” ಎಂದು ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನವನ್ನು ಗ್ರಾಮ ಪಂಚಾಯತ್‌ಗಳ ಮೂಲಕ ನಡೆಸಲಾಗುತ್ತಿದ್ದು, ಜಲಸಂರಕ್ಷಣೆ, ಗ್ರಾಮದ ಮೂಲ ಅವಶ್ಯಕತೆಗಳ ಪೂರೈಕೆ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಯೋಜನೆಯನ್ನು ವಿಂಗಡಿಸಲಾಗಿದೆ ಎಂದು ಕಾಗೇರಿ ವಿವರಿಸಿದರು.

“ಉದ್ಯೋಗ ಖಾತ್ರಿ ಯೋಜನೆಯಲ್ಲಿ ದೇಶಾದ್ಯಂತ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಕರ್ನಾಟಕದಲ್ಲೂ ನಡೆದಿರುವ ಭ್ರಷ್ಟಾಚಾರದ ಕುರಿತು ಸಮರ್ಪಕ ತನಿಖೆ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ಕಾಯ್ದೆಯ ಮೂಲಕ ಯೋಜನೆಯನ್ನು ಪಾರದರ್ಶಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ” ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದ ಅನೇಕ ಜನಪರ ಯೋಜನೆಗಳು ಜನರಿಗೆ ತಲುಪದಂತೆ ಕಾಂಗ್ರೆಸ್ ಅಡ್ಡಿಪಡಿಸಿದೆ ಎಂದು ಆರೋಪಿಸಿದ ಕಾಗೇರಿ, “ಕಾಂಗ್ರೆಸ್‌ಗೆ ಬಡತನ ನಿರ್ಮೂಲನೆ ಮಾಡುವ ನಿಜವಾದ ಇಚ್ಛಾಶಕ್ತಿ ಇಲ್ಲ. ಹೀಗಾಗಿ ಉದ್ಯೋಗ ಖಾತ್ರಿ ಯೋಜನೆಯ ವಿರುದ್ಧ ಅಪಪ್ರಚಾರ ನಡೆಸುತ್ತಿದೆ. ಇದು ಕಾಂಗ್ರೆಸ್‌ನ ಹತಾಶೆಯ ಪ್ರತಿಫಲ” ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕರಾದ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಬ್ರಿಜೇಶ್ ಚೌಟ, ಗಣೇಶ್ ಕಾರ್ಣಿಕ್, ಕಿಶೋರ್ ಕುಮಾರ್, ವಸಂತ್ ಪೂಜಾರಿ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.