ಬೆಂಗಳೂರು: ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ದಂತ ವೈದ್ಯಕೀಯ (ಡೆಂಟಲ್) ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. ಕಾಲೇಜು ಆಡಳಿತ ಮಂಡಳಿ ಹಾಗೂ ಉಪನ್ಯಾಸಕರ ನಿರಂತರ ಮಾನಸಿಕ ಕಿರುಕುಳವೇ ತಮ್ಮ ಮಗಳ ಸಾವಿಗೆ ಕಾರಣ ಎಂದು ಮೃತ ವಿದ್ಯಾರ್ಥಿನಿಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಪರಿಮಳ ಮತ್ತು ಭೋದೆವಯ್ಯ ದಂಪತಿಯ ಏಕೈಕ ಪುತ್ರಿ ಯಶಸ್ವಿನಿ (23) ಈ ದುರ್ಘಟನೆಗೆ ಬಲಿಯಾದ ವಿದ್ಯಾರ್ಥಿನಿ. ಆಕೆ ಬೊಮ್ಮನಹಳ್ಳಿಯ ಪ್ರತಿಷ್ಠಿತ ಡೆಂಟಲ್ ಕಾಲೇಜಿನಲ್ಲಿ ಓರಲ್ ಮೆಡಿಸಿನ್ ಅಂಡ್ ರೇಡಿಯಾಲಜಿ ವಿಭಾಗದಲ್ಲಿ ಮೂರನೇ ವರ್ಷದ ವ್ಯಾಸಂಗ ಮಾಡುತ್ತಿದ್ದರು.
ಪೋಷಕರ ಮಾಹಿತಿ ಪ್ರಕಾರ, ಬುಧವಾರ ಕಣ್ಣಿನ ನೋವಿನ ಕಾರಣ ಯಶಸ್ವಿನಿ ಕಾಲೇಜಿಗೆ ರಜೆ ಹಾಕಿದ್ದು, ಗುರುವಾರ ಕಾಲೇಜಿಗೆ ಹಾಜರಾಗಿದ್ದರು. ಈ ವೇಳೆ ಉಪನ್ಯಾಸಕರು ಸಹಪಾಠಿಗಳ ಎದುರಲ್ಲೇ ಅವಮಾನಕಾರಿ ರೀತಿಯಲ್ಲಿ ಮಾತನಾಡಿದ್ದು, ಇದರಿಂದ ಆಕೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾಳೆ ಎಂದು ಆರೋಪಿಸಲಾಗಿದೆ.

“ಕಣ್ಣಿಗೆ ಯಾವ ಡ್ರಾಪ್ಸ್ ಹಾಕಿಕೊಂಡೆ? ಎಷ್ಟು ಹನಿ ಹಾಕಿದೆ? ಇಡೀ ಬಾಟಲ್ ಸುರಿದುಕೊಂಡೆಯಾ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿ ಅವಮಾನಿಸಲಾಗಿದೆ. ಅಲ್ಲದೆ, ಸೆಮಿನಾರ್ ನೀಡಲು ಅವಕಾಶ ನೀಡದೇ, ರೇಡಿಯಾಲಜಿ ಕೇಸ್‌ಗಳನ್ನು ಹಂಚಿಕೆ ಮಾಡದೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಮೃತಳ ತಾಯಿ ಪರಿಮಳ ಕಣ್ಣೀರಿಟ್ಟಿದ್ದಾರೆ. ಕಾಲೇಜಿನ ಪ್ರಾಂಶುಪಾಲರು ಹಾಗೂ ಸಂಬಂಧಪಟ್ಟ ಉಪನ್ಯಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆಯೇ ಯಶಸ್ವಿನಿಯ ಸಹಪಾಠಿಗಳು ಶವಾಗಾರದ ಮುಂದೆ ಜಮಾಯಿಸಿ ಆಕ್ಸ್‌ಫರ್ಡ್ ಕಾಲೇಜು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು. “ಯಶಸ್ವಿನಿ ಓದಿನಲ್ಲಿ ಉತ್ತಮವಾಗಿದ್ದಳು. ಆದರೆ ಕಾಲೇಜಿನ ಕಿರುಕುಳವೇ ಆಕೆಯನ್ನು ಬಲಿಪಡೆದಿದೆ” ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ, ನ್ಯಾಯ ಒದಗಿಸಬೇಕೆಂದು ಘೋಷಣೆ ಕೂಗಿದರು.

ಈ ಸಂಬಂಧ ಆನೇಕಲ್ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಲೇಜು ಆಡಳಿತ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.