ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಕಾಂಗ್ರೆಸ್–ಬಿಜೆಪಿ ಎಲ್ಲರೂ ಫೇಲ್ ಆಗಿದ್ದೇವೆ: ಡಿಕೆಶಿ

ಮಂಗಳೂರು: ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಅಪಾರ ಪ್ರಕೃತಿ ಸಂಪತ್ತು ಇದ್ದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಕೇರಳ ಮತ್ತು ಗೋವಾ ತಮ್ಮ ಕರಾವಳಿ ಸಂಪತ್ತನ್ನು ಪ್ರವಾಸೋದ್ಯಮದ ಮೂಲಕ ಯಶಸ್ವಿಯಾಗಿ ಎನ್‌ಕ್ಯಾಷ್ ಮಾಡಿಕೊಂಡಿರುವಾಗ, ಕರ್ನಾಟಕದ ಕರಾವಳಿ ಮಾತ್ರ ಪ್ರವಾಸೋದ್ಯಮ  ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಪಿಲಿಕುಳದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಅಭಿವೃದ್ಧಿಪಡಿಸಲಾದ ‘ಪಿಲಿಕುಳ ರೆಸಾರ್ಟ್’ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿರುವ ಅವರು,  ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕರಾವಳಿ, ಮಲೆನಾಡು ಮತ್ತು ಕೋಸ್ಟಲ್ ಬೆಲ್ಟ್ ಸುಮಾರು 300 ಕಿಲೋಮೀಟರ್ ವಿಸ್ತಾರ ಹೊಂದಿದೆ. ಇಷ್ಟೊಂದು ಸಂಪತ್ತಿದ್ದರೂ ನಾವು ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ – ಎಲ್ಲರೂ ಫೇಲ್ ಆಗಿದ್ದೇವೆ. ಇದರ ಪರಿಣಾಮವಾಗಿ ಯುವಕರು ಉದ್ಯೋಗಕ್ಕಾಗಿ ಸೌದಿ, ದುಬೈ, ಬೆಂಗಳೂರು ಮೊದಲಾದ ಕಡೆಗಳಿಗೆ ವಲಸೆ ಹೋಗುತ್ತಿದ್ದಾರೆ” ಎಂದು ಹೇಳಿದರು.

ರಾಜ್ಯದ ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಅಪಾರ ಅವಕಾಶಗಳಿದ್ದು, ಇದಕ್ಕಾಗಿ ಸೂಕ್ತ ಟೂರಿಸಂ ಪಾಲಿಸಿಯ ಅಗತ್ಯವಿದೆ ಎಂದು ಡಿಕೆಶಿ ಹೇಳಿದರು. “ನಮ್ಮ ಸರ್ಕಾರದ ಟೂರಿಸಂ ಪಾಲಿಸಿ ಕರಾವಳಿಗೆ ಪೂರಕವಾಗಿಲ್ಲ ಎಂಬುದನ್ನು ನಾನು ಪ್ರವಾಸೋದ್ಯಮ ಸಚಿವರ ಗಮನಕ್ಕೂ ತಂದಿದ್ದೇನೆ. ಕೇಂದ್ರ ಸರ್ಕಾರವೂ ಈ ಭಾಗದ ಅಭಿವೃದ್ಧಿಗೆ ವಿಶೇಷ ಆಸಕ್ತಿ ತೋರಿಸಬೇಕು” ಎಂದು ಅವರು ಹೇಳಿದರು.

ವಿದೇಶಗಳಲ್ಲಿ ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವ ಅನೇಕ ಉದ್ಯಮಿಗಳು ತಮ್ಮ ಹುಟ್ಟೂರಿನ ಅಭಿವೃದ್ಧಿಗೆ ಹೂಡಿಕೆ ಮಾಡಲು ಸಿದ್ಧತೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ ಡಿಕೆಶಿ, “ಇಲ್ಲಿನ ಯುವಕರಲ್ಲಿ ಸಾಮರ್ಥ್ಯ ಇದೆ. ಅವರು ವಿದೇಶಗಳಲ್ಲಿ ಉತ್ತಮವಾಗಿ ಬೆಳೆಯುತ್ತಿದ್ದಾರೆ. ತಮ್ಮ ಜನ್ಮಭೂಮಿಗೆ ಕೊಡುಗೆ ನೀಡಬೇಕೆಂಬ ಮನಸ್ಸು ಅವರಲ್ಲಿ ಇದೆ. ಇದನ್ನು ಬಳಸಿಕೊಂಡು ಕರಾವಳಿ ಮತ್ತು ಮಲೆನಾಡಿಗೆ ಸೂಕ್ತ ಪ್ರವಾಸೋದ್ಯಮ ನೀತಿ ರೂಪಿಸಬೇಕು” ಎಂದರು.

ಈ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ದೀರ್ಘ ಚರ್ಚೆ ನಡೆಸಲು ಸಭೆ ಕರೆದಿರುವುದಾಗಿ ಅವರು ತಿಳಿಸಿದರು. “ಸಮಸ್ಯೆಗಳೇನು, ಸರ್ಕಾರ ಯಾವ ರೀತಿಯಲ್ಲಿ ಸಹಕಾರ ನೀಡಬಹುದು, ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಹಾಗೂ ಪ್ರೈವೇಟ್ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ಹೇಗೆ ಕೊಡಬಹುದು ಎಂಬ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಮಲೆನಾಡು ಭಾಗದ ಜನಪ್ರತಿನಿಧಿಗಳು, ಉದ್ಯಮಿಗಳು ಸಹಕಾರ ನೀಡಬೇಕು” ಎಂದು ಹೇಳಿದರು.

ಕರಾವಳಿ ಪ್ರದೇಶದಲ್ಲಿ ಸಿಆರ್‌ಝಡ್, ಡಿಫೆನ್ಸ್ ಹಾಗೂ ಇತರ ನಿಯಂತ್ರಣ ಅಂಶಗಳಿರುವುದನ್ನು ಉಲ್ಲೇಖಿಸಿದ ಡಿಕೆಶಿ, “ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತಜ್ಞರನ್ನು ಕರೆಸಿ ಅವರ ಅಭಿಪ್ರಾಯವನ್ನು ಸಾರ್ವಜನಿಕರ ಗಮನಕ್ಕೂ ತರಲಾಗುತ್ತದೆ. ಅಗತ್ಯವಿದ್ದರೆ ನಿಯಮಗಳಲ್ಲಿ ತಿದ್ದುಪಡಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು” ಎಂದು ತಿಳಿಸಿದರು.

“ನಮ್ಮಲ್ಲಿರುವ ಪ್ರಕೃತಿ ಸಂಪತ್ತು ಹಾಗೂ ಯುವಕರ ಕ್ರಿಯಾಶೀಲತೆಯನ್ನು ಸರಿಯಾಗಿ ಬಳಸಿಕೊಂಡು, ನಮ್ಮ ಜನರೇ ಇಲ್ಲಿ ಬೆಳೆಯಬೇಕು ಎನ್ನುವುದೇ ನನ್ನ ಆಸೆ” ಎಂದು ಉಪಮುಖ್ಯಮಂತ್ರಿ ಹೇಳಿದರು.

ಇದೇ ವೇಳೆ, ದ್ವೇಷ ಭಾಷಣ ಮಸೂದೆ, ಒಳಮೀಸಲಾತಿಗೆ ಕಾನೂನು ಮಾನ್ಯತೆ ನೀಡುವ ಪರಿಶಿಷ್ಟ ವರ್ಗಗಳ ಮಸೂದೆ ಹಾಗೂ ಚಾಮುಂಡೇಶ್ವರಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಮಸೂದೆಗಳನ್ನು ರಾಜ್ಯಪಾಲ ಥಾವರ್ ಸಿಂಗ್ ಗೆಹ್ಲೂಟ್ ಸ್ಪಷ್ಟನೆ ಕೇಳಿ ವಾಪಸ್ ಕಳುಹಿಸಿರುವ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, “ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಾರೆ. ಈ ಕುರಿತು ಅವರನ್ನೇ ಕೇಳಿ” ಎಂದು ಡಿಕೆಶಿ ಪ್ರತಿಕ್ರಿಯಿಸಿದರು.

error: Content is protected !!