ಇಂದಿನಿಂದ ನಾಲ್ಕನೇ ಆವೃತ್ತಿ ಮಹಿಳಾ ಪ್ರೀಮಿಯರ್ ಲೀಗ್ ಆರಂಭ!

ಮುಂಬೈ: ವುಮೆನ್ಸ್‌ ಪ್ರೀಮಿಯರ್‌ ಲೀಗ್‌ (WPL) 4ನೇ ಆವೃತ್ತಿ ಇಂದಿನಿಂದ ಆರಂಭಗೊಳ್ಳಲಿದ್ದು, ಮುಂಬೈಯ ಡಿ.ವೈ. ಪಾಟೀಲ್‌ ಮೈದಾನದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ 2 ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಮತ್ತು 1 ಬಾರಿ ಗೆದ್ದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಕಾದಾಡಲಿವೆ. 5 ತಂಡಗಳ ನಡುವಿನ ಈ ಟಿ20 ಲೀಗ್‌ ಪಂದ್ಯಾವಳಿ ಫೆ.5ರಂದು ನಡೆಯುವ ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ.

ಮುಂಬೈ, ಆರ್‌ಸಿಬಿ, ಗುಜರಾತ್‌ ಜೈಂಟ್ಸ್‌, ಯುಪಿ ವಾರಿಯರ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಈ 5 ತಂಡಗಳು ಟ್ರೋಫಿಗಾಗಿ ಸೆಣಸಾಡಲಿದ್ದು, ಪಂದ್ಯಾವಳಿ 28 ದಿನಗಳ ಕಾಲ ರಂಜಿಸಲಿದೆ. ನವಿ ಮುಂಬೈ ಮತ್ತು ವಡೋದರಾ 2 ತಾಣಗಳಲ್ಲಿ ಒಟ್ಟಾರೆ 22 ಪಂದ್ಯಗಳು ನಡೆಯಲಿವೆ. ಪ್ರತೀ ತಾಣದಲ್ಲಿ ತಲಾ 11 ಪಂದ್ಯಗಳು ನಡೆಯಲಿವೆ. ಫೆ.1ರವರೆಗೆ ಲೀಗ್‌ ನಡೆದರೆ, ಫೆ.3ಕ್ಕೆ ಎಲಿಮಿನೇಟರ್‌, ಫೆ.5ಕ್ಕೆ ಫೈನಲ್‌ ನಡೆಯಲಿದೆ. ಕ್ಲ್ಲಕ್ಕೂ ವಡೋದರಾ ತಾಣ. ಪಂದ್ಯಗಳು ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರಗೊಳ್ಳಲಿವೆ.

ಈ ಬಾರಿ ಕಣದಲ್ಲಿರುವ ದುಬಾರಿ ಆಟಗಾರ್ತಿಯರೆಂದರೆ ಭಾರತದ ಆಲ್‌ ರೌಂಡರ್‌ ದೀಪ್ತ ಶರ್ಮಾ ಮತ್ತು ಮುಂಬೈ ಪರ ಆಡುವ ಕಿವೀಸ್‌ನ ಅಮೆಲಿಯಾ ಕೆರ್‌. ಇಬ್ಬರನ್ನೂ ಆಯಾ ತಂಡಗಳು ಕಳೆದ ಹರಾಜಿನ ವೇಳೆ 3.20 ಕೋಟಿ ರೂ.ಗೆ ಖರೀದಿಸಿದ್ದವು. ದೊಡ್ಡ ಮೊತ್ತಕ್ಕೆ ಹರಾಜಾದ ಅನ್‌ಕ್ಯಾಪ್ಡ್‌ ಆಟಗಾರ್ತಿಯೆಂದರೆ ಅನುಷ್ಕಾ ಶರ್ಮಾ. ಅವರನ್ನು ಗುಜರಾತ್‌ 45 ಲಕ್ಷ ರೂ.ಗೆ ಖರೀದಿಸಿತ್ತು.

ವುಮೆನ್ಸ್‌ ಪ್ರೀಮಿಯರ್‌ ಲೀಗ್‌ 4ನೇ ಆವೃತ್ತಿಯಲ್ಲಿ ಗೆಲ್ಲುವ ತಂಡಕ್ಕೆ 6 ಕೋಟಿ ರೂ. ನಗದು ಬಹುಮಾನ ಸಿಗಲಿದ್ದು, ರನ್ನರ್‌ಅಪ್‌ ತಂಡಕ್ಕೆ 3 ಕೋಟಿ ರೂ. ಲಭಿಸಲಿದೆ. ಇನ್ನುಳಿದಂತೆ ಆರೆಂಜ್‌ ಕ್ಯಾಪ್‌ (ಗರಿಷ್ಠ ರನ್‌), ಪರ್ಪಲ್‌ ಕ್ಯಾಪ್‌ (ಗರಿಷ್ಠ ವಿಕೆಟ್‌), ಹೆಚ್ಚು ಮೌಲ್ಯಯುತ ಆಟಗಾರ್ತಿ, ಉದಯೋನ್ಮುಖ ಆಟಗಾರ್ತಿ ಇತ್ಯಾದಿ ತಲಾ 5 ಲಕ್ಷ ರೂ. ಹೊಂದಿರಲಿದೆ.

error: Content is protected !!