ಥಾಣೆ: ಚುನಾವಣೆಯ ನಂತರ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಕ್ಕಾಗಿ ಕಾಂಗ್ರೆಸ್‌ನಿಂದ ಅಮಾನತುಗೊಂಡಿದ್ದ ಅಂಬರ್‌ನಾಥ್ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಹೊಸದಾಗಿ ಆಯ್ಕೆಯಾದ ಹನ್ನೆರಡು ಕೌನ್ಸಿಲರ್‌ಗಳು ಔಪಚಾರಿಕವಾಗಿ ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

12 ಕಾಂಗ್ರೆಸ್ ಕಾರ್ಪೊರೇಟರ್‌ಗಳು ಬಿಜೆಪಿ ಸೇರುತ್ತಾರೆ ಎಂದು ಮಹಾರಾಷ್ಟ್ರ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ರವೀಂದ್ರ ಚವಾಣ್ ಅವರು ಬುಧವಾರ ತಡರಾತ್ರಿ ಬಿಜೆಪಿ ಕಚೇರಿಯಲ್ಲಿ ಘೋಷಿಸಿದರು ಮತ್ತು ಈ ಕ್ರಮವು ಅಧಿಕಾರಕ್ಕಾಗಿ ಅಲ್ಲ, ಬದಲಾಗಿ ಅಭಿವೃದ್ಧಿಗಾಗಿ ಎಂದು ಪ್ರತಿಪಾದಿಸಿದರು. “ಜನರು ಈ ಕೌನ್ಸಿಲರ್‌ಗಳನ್ನು ಆಯ್ಕೆ ಮಾಡಿದರು ಮತ್ತು ಅವರು ನಾಗರಿಕರಿಗೆ ಅಭಿವೃದ್ಧಿಯ ಭರವಸೆ ನೀಡಿದ್ದರು. ಸರ್ಕಾರವು ಕ್ರಿಯಾತ್ಮಕ ರೀತಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಮತ್ತು ಜನರಿಗೆ ನ್ಯಾಯ ಹಾಗೂ ಅಭಿವೃದ್ಧಿಯನ್ನು ತಲುಪಿಸಲು ಸಮರ್ಥವಾಗಿರುವುದರಿಂದ ಅವರು ನಮ್ಮೊಂದಿಗೆ ಬಂದಿದ್ದಾರೆ” ಎಂದು ಅವರು ಹೇಳಿದರು.

ಡಿಸೆಂಬರ್ 20 ರಂದು ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯ ನಂತರ, ಬಿಜೆಪಿ ತನ್ನ ಬದ್ಧ ಎದುರಾಳಿ ಕಾಂಗ್ರೆಸ್‌ನೊಂದಿಗೆ ‘ಅಂಬರ್‌ನಾಥ್ ವಿಕಾಸ್ ಅಘಾಡಿ’ (AVA) ಬ್ಯಾನರ್ ಅಡಿಯಲ್ಲಿ ಮೈತ್ರಿ ಮಾಡಿಕೊಂಡು ಅಂಬರ್‌ನಾಥ್ ಮುನ್ಸಿಪಲ್ ಕೌನ್ಸಿಲ್(ಥಾಣೆ ಜಿಲ್ಲೆಯಲ್ಲಿ)ನಲ್ಲಿ ಅಧಿಕಾರ ಹಿಡಿದಿತ್ತು. ಮಿತ್ರಪಕ್ಷ ಶಿವಸೇನೆಯು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಅದನ್ನು ಹೊರಗಿಟ್ಟು ಬಿಜೆಪಿ ಸರ್ಕಾರ ರಚಿಸಿದೆ.

60 ಸದಸ್ಯರ ಸ್ಥಳೀಯ ಸಂಸ್ಥೆಯಲ್ಲಿ AVA 31 ಸ್ಥಾನಗಳ ಬಹುಮತವನ್ನು ಗಳಿಸಿತ್ತು. ಇತ್ತೀಚಿನ ಚುನಾವಣೆಲ್ಲಿ, ಶಿವಸೇನೆ 27 ಸ್ಥಾನಗಳನ್ನು ಗೆದ್ದು, ಬಹುಮತಕ್ಕೆ ಕೇವಲ ನಾಲ್ಕು ಸ್ಥಾನಗಳ ಕೊರತೆ ಅನುಭವಿಸಿತು. ಇದರ ಲಾಭ ಪಡೆದ ಬಿಜೆಪಿ(14) ಕಾಂಗ್ರೆಸ್(12) NCP(4) ಮತ್ತು ಇಬ್ಬರು ಪಕ್ಷೇತರರೊಂದಿಗೆ ಅಧಿಕಾರ ಹಿಡಿದಿತ್ತು.

ಈ ವಿಚಿತ್ರ ಮೈತ್ರಿಯಿಂದ ಆಕ್ರೋಶಗೊಂಡ ಕಾಂಗ್ರೆಸ್ ಬುಧವಾರ, ಹೊಸದಾಗಿ ಆಯ್ಕೆಯಾದ ತನ್ನ 12 ಕೌನ್ಸಿಲರ್‌ಗಳು ಹಾಗೂ ಬ್ಲಾಕ್ ಅಧ್ಯಕ್ಷರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು. ಅಮಾನತುಗೊಂಡ 12 ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆಗೊಂಡಿರುವುದು ಪುರಸಭೆಯಲ್ಲಿನ ರಾಜಕೀಯ ಸಮೀಕರಣವನ್ನು ಗಣನೀಯವಾಗಿ ಬದಲಾಯಿಸಿದೆ.