ಗುರುಪುರ ಸೇತುವೆ ದಿನವೂ ಸಾವಿರಾರು ಜನರನ್ನು ದಾಟಿಸುತ್ತದೆ. ಕೆಲವರು ಕೆಲಸಕ್ಕೆ, ಕೆಲವರು ಮನೆಗೆ, ಕೆಲವರು ಕನಸುಗಳೊಂದಿಗೆ, ಕೆಲವರು ಸೋಲಿನ ಮೌನದೊಂದಿಗೆ. ಕೆಲವರಿಗದು ಮೀನು ಹಿಡಿಯುವ ಹವ್ಯಾಸಿ ತಾಣವೂ ಹೌದು. ಆದರೆ ಆ ದಿನ… ಆ ಸೇತುವೆ ಒಂದು ಯುವ ಮನಸ್ಸಿನ ಕೊನೆಯ ನಿಲ್ದಾಣವಾಗಿ ಬಿಟ್ಟಿತು.

ಹೆಸರು ನವ್ಯಾ. ಕೇವಲ ಇಪ್ಪತ್ತು ವರ್ಷ ವಯಸ್ಸು.
ನವ್ಯಾ ಎಂದರೆ ಹೊಸತು ಎಂದರ್ಥ. ಆದರೆ ಬದುಕಿನ ಹೊಸತನ ಅಂದರೆ ಏನು ಅನ್ನೋದನ್ನ ಪೂರ್ಣವಾಗಿ ಅರಿಯುವ ಮೊದಲೇ, ಬದುಕನ್ನೇ ಮುಗಿಸಿಕೊಂಡು ಹೊರಟು ಹೋದಳು. ಆಕೆ ಹುಟ್ಟಿದ ಮನೆಗೆ ಇನ್ನೂ ಆಕೆಯ ನಗುವಿನ ಪ್ರತಿಧ್ವನಿ ಉಳಿದಿರಬೇಕಿತ್ತು. ಅಮ್ಮನ ಲಾಲಿತ್ಯದಲ್ಲಿ, ಅಪ್ಪನ ಪ್ರೀತಿಯ ಭೀತಿಯಲ್ಲಿ, ಮನೆಯ ಮೂಲೆಮೂಲೆಗಳಲ್ಲಿ ಗೆಜ್ಜೆನಾದದೊಂದಿಗೆ ಕಿಲ ಕಿಲ ನಗುತ್ತಾ ಧ್ವನಿಯಾಗಬೇಕಿತ್ತು.
ಆದರೆ ನಿನ್ನೆ ನಡೆದಿದ್ದೇನು? ಪ್ರತಿದಿನವೂ “ನವ್ಯಾ ಬರುತ್ತಾಳೆ” ಏನಾದರೂ ಹೊಸತನ್ನು ತರುತ್ತಾಳೆ ಎಂದು ನಿರೀಕ್ಷಿಸಿದ್ದ ಅಂದು ನವ್ಯಾ ಬರಲಿಲ್ಲ.

ಆದರೆ ಆಕೆ ಮರಳಿದ್ದು ಮೌನವಾಗಿ. ಅತ್ಯಂತ ಭೀಕರ ಮೌನವಾಗಿ. ಇನ್ನೆಂದಿಗೂ ಬರುವುದಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲೂ ಸಾಧ್ಯವಾಗದಷ್ಟು ಭೀಕರವಾಗಿ… ಪ್ರೀತಿ… ಅದು ಮನುಷ್ಯನನ್ನು ಬದುಕಿಸಲು ಶಕ್ತಿ ಕೊಡುತ್ತದೆ. ಚೈತನ್ಯ ಕೊಡುತ್ತದೆ, ಆದರೆ ಅದೇ ಪ್ರೀತಿ, ಒಬ್ಬನು “ನಾನು ಇಲ್ಲ” ಎಂದು ಹೇಳಿದಾಗ ಅಷ್ಟೊಂದು ಭಾರವಾಗಿ ಬಿದ್ದುಬಿಡುತ್ತೆ ಅನ್ನೋದನ್ನ ನವ್ಯಾ ಊಹಿಸಿರಲಿಲ್ಲ.

ಒಬ್ಬನ ಫೋನ್ ಸ್ವೀಕರಿಸದ ಮೌನ… ಒಂದು ನಿರಾಕರಣೆಯ ಉತ್ತರ… ಅದರ ಮಧ್ಯೆ ಮನಸ್ಸಿಗೆ ತಟ್ಟಿದ ನೋವು… ಅದೇ ನೋವನ್ನೇ ಅಂತಿಮ ಸತ್ಯ ಎಂದು ನಂಬಿಬಿಟ್ಟ ಕ್ಷಣ. ಆ ಕ್ಷಣದಲ್ಲಿ ಯಾರಾದರೂ ಒಬ್ಬರು “ನಿಲ್ಲು ನವ್ಯಾ… ಇದು ಅಂತ್ಯ ಅಲ್ಲ… ಇನ್ನೊಂದು ಸುಂದರವಾದ ಮುಂಜಾನೆ ಇದೆ ನಿನ್ನ ಅಮ್ಮನ ಕಣ್ಣುಗಳನ್ನು ನಪಿಸಿಕೋ…” ಎಂದು ಹೇಳಿದ್ದರೆ?

ಬಹುಶಃ ನವ್ಯಾ ಇಂದೂ ಬದುಕುತ್ತಿದ್ದಳೋ ಏನೋ?
ಪ್ರೀತಿ ಕೈಕೊಟ್ಟಾಗ ಬದುಕು ಮುಗಿಯೋದಿಲ್ಲ. ಆದರೆ ಬದುಕೇ ಕೈಕೊಟ್ಟಾಗ ಪ್ರೀತಿಯೂ ಅರ್ಥವಿಲ್ಲದಾಗಿ ಹೋಗುತ್ತದೆ. ನಾವು ಇಂದು ಪ್ರೀತಿಯ ಅನೇಕ ಕಥೆಗಳನ್ನು ಸಿನಿಮಾಗಳಲ್ಲಿ, ಕವನಗಳಲ್ಲಿ, ರೀಲ್ಸ್‌ಗಳಲ್ಲಿ ಕೇಳುತ್ತೇವೆ. ಆದರೆ ಆದರೆ ಪ್ರೀತಿ ವಿಫಲವಾದಾಗ ಹೇಗೆ ಬದುಕಬೇಕು ಅನ್ನೋದನ್ನು ಯಾರೂ ಹೇಳೋದಿಲ್ಲ. ನಾವಾಗಿಯೇ ನಮಗೆ ಧೈರ್ಯ ತಂದುಕೊಳ್ಳಬೇಕು.

“ನೀನು ತಳ್ಳಲ್ಪಟ್ಟಿಲ್ಲ, ನಿನ್ನನ್ನು ತಳ್ಳಿಬಿಟ್ಟವನು ನಿನ್ನ ಬದುಕಿಗೆ ಅರ್ಹನಲ್ಲ ಅಷ್ಟೇ… ಒಂದು ಸಂಬಂಧ ಮುರಿದರೆ ಒಂದು ಜೀವನ ಮುರಿಯಬೇಕಾ? ಒಬ್ಬ ಮನುಷ್ಯ ಕೈಕೊಟ್ಟರೆ ಈ ಜಗತ್ತೇ ಕೈಕೊಟ್ಟಂತೆ ಭಾಸವಾಗುತ್ತಾ?” ಈ ರೀತಿಯ ಧೈರ್ಯವನ್ನು ನವ್ಯಾ ತಂದುಕೊಳ್ಳಬೇಕಿತ್ತು.

ನವ್ಯಾ ದುರ್ಬಲಳಲ್ಲ. ಆಕೆ ನೋವಿನಲ್ಲಿ ಒಂಟಿಯಾಗಿದ್ದಳು. ಒಂಟಿತನವೇ ಇಲ್ಲಿ ಅಪರಾಧಿ. ಈ ನೋವು ಶಾಶ್ವತವಲ್ಲ. ಇದು ಒಂದು ಹಂತ ಮಾತ್ರ. ನೀನು ಬದುಕಿದರೆ ಮಾತ್ರ ನಾಳೆ ಸಾಧ್ಯ. ನೀನು ಉಳಿದರೆ ಮಾತ್ರ ನಿಮ್ಮ ಕಥೆ ಬೇರೆಯಾಗಿ ಬರೆಯಬಹುದು. ಪ್ರೀತಿಗಾಗಿ ಸಾಯಬೇಡ. ಪ್ರೀತಿಯನ್ನು ಕಳೆದುಕೊಂಡರೂ ಬದುಕಿ ತೋರಿಸು ಅವನಿಗಿಂತ ದಿವಿನಾದ ಒಂದು ಹೃದಯ ನಿನಗಾಗಿ ಕಾದಿರುತ್ತದೆ ಎನ್ನುವುದನ್ನು ಅವಳಲ್ಲಿ ಹೇಳಿದ್ದರೆ ನವ್ಯಾ ಈ ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ.

ನಮ್ಮ ಬದುಕು ಯಾರೊಬ್ಬರ “ಇಲ್ಲ” ಎಂಬ ಉತ್ತರಕ್ಕಿಂತ ಅತಿ ದೊಡ್ಡದು. ಗುರುಪುರ ಸೇತುವೆ ನವ್ಯಾಳ ಕಥೆಯನ್ನು ಇಲ್ಲಿಯೇ ಮುಗಿಸಲಿ. ಇನ್ನೊಬ್ಬ ನವ್ಯಾ ಯಾವುದೇ ಸೇತುವೆಯ ಮೇಲೆ ನಿಂತು ಜೀವನಕ್ಕೆ ಬೆನ್ನು ತೋರಿಸಬಾರದು.
