ಬೆಂಗಳೂರು: ಗೋವಾದ ಸಿನಿಮಾ ಫೆಸ್ಟಿವಲ್‌ನ ಆ ವೇದಿಕೆಯಲ್ಲಿ ಬಾಲಿವುಡ್‌ನ ರಣವೀರ್ ಸಿಂಗ್ ಅವರು ಎಂದಿನಂತೆ ತಮ್ಮ ಅತಿಯಾದ ಉತ್ಸಾಹದಲ್ಲಿದ್ದರು. ಆದರೆ, ಅದೇ ವೇದಿಕೆಯ ಮೇಲೆ ರಿಷಬ್ ಶೆಟ್ಟಿ ಅವರನ್ನು ಹೊಗಳುವ ಭರದಲ್ಲಿ ರಣವೀರ್ ಅವರು ತುಳುನಾಡಿನ ಪವಿತ್ರ ʻದೈವ’ವನ್ನೇ “ಫೀಮೇಲ್ ಗೋಸ್ಟ್” (ಮಹಿಳಾ ದೆವ್ವ) ಎಂದು ಕರೆದುಬಿಟ್ಟರು. ಪಕ್ಕದಲ್ಲೇ ಇದ್ದ ರಿಷಬ್ ಶೆಟ್ಟಿ ಅವರು ಸಂಕೋಚದಿಂದಲೇ “ಹಾಗೆ ಮಾಡಬೇಡಿ” ಎಂದು ಕೈಮುಗಿದು ವಿನಂತಿಸಿದರೂ, ರಣವೀರ್ ಅವರು ಅದನ್ನು ಗಂಭೀರವಾಗಿ ಪರಿಗಣಿಸದೆ ತಮ್ಮ ಆ ಆಣಕವನ್ನು ಮುಂದುವರಿಸಿದ್ದರು.

ಮಂಗಳವಾರ ಈ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠವು ರಣವೀರ್ ಸಿಂಗ್ ಅವರಿಗೆ ಸರಿಯಾದ ರೀತಿಯಲ್ಲೇ ಎಚ್ಚರಿಕೆ ನೀಡಿದೆ. “ನೀವು ಎಷ್ಟೇ ದೊಡ್ಡ ಸೂಪರ್ ಸ್ಟಾರ್ ಆಗಿರಬಹುದು, ಆದರೆ ಜನರ ಧಾರ್ಮಿಕ ಭಾವನೆಗಳ ಜೊತೆ ಈ ರೀತಿ ಹಗುರವಾಗಿ ಆಟವಾಡುವ ಹಕ್ಕು ಯಾರಿಗೂ ಇಲ್ಲ” ಎಂದು ಕೋರ್ಟ್ ಗರ್ಜಿಸಿದೆ. ಕರಾವಳಿ ಜನರ ನಂಬಿಕೆ ಮತ್ತು ದೈವಾರಾಧನೆಯ ಬಗ್ಗೆ ಅರಿವಿಲ್ಲದೆ ಮಾತನಾಡುವುದು ಎಷ್ಟು ತಪ್ಪು ಎಂಬುದನ್ನು ಕೋರ್ಟ್ ಎಳೆ ಎಳೆಯಾಗಿ ಬಿಚ್ಚಿಟ್ಟಿದೆ.

ರಣವೀರ್ ಸಿಂಗ್ ಅವರ ಪರ ವಕೀಲರು ಕ್ಷಮೆಯಾಚನೆಯ ಬಗ್ಗೆ ಮಾತನಾಡಿದಾಗ, ನ್ಯಾಯಮೂರ್ತಿಗಳು ಒಂದು ಮಾರ್ಮಿಕ ಮಾತು ಹೇಳಿದರು. “ನೀವು ಕ್ಷಮೆ ಕೇಳಬಹುದು, ಆದರೆ ಒಮ್ಮೆ ಆಡಲಾದ ಮಾತು ಮತ್ತು ಅಣಕದ ಆ ವಿಡಿಯೋಗಳನ್ನು ಇಂಟರ್ನೆಟ್ ಎಂದಿಗೂ ಮರೆಯುವುದಿಲ್ಲ. ಕಲಾವಿದರು ವೇದಿಕೆಯ ಮೇಲೆ ನಿಂತಾಗ ಸಮಾಜದ ಬಗ್ಗೆ ಮತ್ತು ಸಂಸ್ಕೃತಿಯ ಬಗ್ಗೆ ಜವಾಬ್ದಾರಿಯಿಂದ ವರ್ತಿಸಬೇಕು” ಎಂಬ ಕಿವಿಮಾತು ಬಾಲಿವುಡ್‌ನ ಮಂದಿಗೆ ಚಾಟಿ ಬೀಸಿದಂತಿದೆ.

ಸದ್ಯಕ್ಕೆ ಪೊಲೀಸರು ರಣವೀರ್ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸುವಂತಿಲ್ಲ ಎಂದು ಕೋರ್ಟ್ ತಿಳಿಸಿದೆ. ಆದರೆ, ದೈವದ ವಿಚಾರದಲ್ಲಿ ನಡೆದ ಈ ಅವಮಾನ ಕನ್ನಡಿಗರ ಮನಸ್ಸಿನಲ್ಲಿ ಒಂದು ಮಾಸದ ಕಲೆಯಾಗಿ ಉಳಿದುಬಿಟ್ಟಿದೆ.
ಬಣ್ಣದ ಲೋಕದ ಅಮಲಲ್ಲಿದ್ದ ರಣವೀರ್‌ಗೆ ದೈವದ ಶಕ್ತಿ ಗೊತ್ತಿರಲಿಲ್ಲ. ಈಗ ಹೈಗ್ರೌಂಡ್ಸ್ ಪೊಲೀಸರ ಎಫ್‌ಐಆರ್ ಮತ್ತು ಹೈಕೋರ್ಟ್‌ನ ತರಾಟೆಯಿಂದ ಬಾಲಿವುಡ್‌ನ ಈ ನಟನಿಗೆ ಅಕ್ಷರಶಃ ಬೆವರಿಳಿಯುತ್ತಿದೆ.