ಮಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಅವರ ʻ ಕರವಾಳಿ ಕೋಮುವಾದ’ದ ಹೇಳಿಕೆಗೆ ಮಂಗಳೂರಿನಲ್ಲಿ ಭರ್ಜರಿ ತಿರುಗೇಟು ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮತ್ತು ಶಾಸಕ ಭರತ್ ಶೆಟ್ಟಿ, “ಸ್ವಕ್ಷೇತ್ರ ಕಲ್ಬುರ್ಗಿಯಲ್ಲಿ ಕುಡಿಯುವ ನೀರು ಕೊಡಲಾಗದವರು ಶೈಕ್ಷಣಿಕ ಕಾಶಿಯಾದ ಕರಾವಳಿಗೆ ಐಟಿ ಪಾಠ ಮಾಡುವುದು ಬೇಡ” ಎಂದು ಕಿಡಿಕಾರಿದ್ದಾರೆ. ಅಲ್ಲದೆ ಪರಿಶಿಷ್ಟ ಜಾತಿಗೆ ಸೇರಿದ ಛಲವಾದಿ ನಾರಾಯಣ ಸ್ವಾಮಿಯವರನ್ನು ʻನಾಯಿ’ಗೆ ಹೋಲಿಸಿ ಅವಹೇಳನ ಮಾಡಿದ ಪುತ್ತೂರು ಶಾಸಕ ಅಶೋಕ್ ರೈ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸಿದ್ದಾಗಿ ಸತೀಶ್ ಕುಂಪಲ ಹೇಳಿದ್ದಾರೆ.

ʻಕೋಮುವಾದದ ಕಾರಣ ಕರಾವಳಿಯಲ್ಲಿ ಐಟಿ-ಬಿಟಿ ಕಂಪನಿ ಬಂಡವಾಳ ಹಾಕಲು ಹೆದರುತ್ತಿದ್ದಾರೆʼ ಎಂಬ ಐಟಿ & ಬಿಟಿ ಹಾಗೂ ಗ್ರಾಮಿಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿರುದ್ಧ ದ.ಕ. ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಭರ್ಜರಿ ತಿರುಗೇಟು ನೀಡಿದ್ದಾರೆ.
ಖರ್ಗೆ ಜಿಲ್ಲೆಯ ಜನತೆಗೆ ನೋವಾಗುವ ಆಗುವ ಹಾಗೆ ಅವಿವೇಕತನದಿಂದ ಮಾತಾಡಿರುವುದು ದುರದೃಷ್ಟಕರ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯ ಸುಪುತ್ರನಾಗಿ, ಮುಖ್ಯಮಂತ್ರಿಯನ್ನೂ ಕಂಟ್ರೋಲ್ ಮಾಡಿ, ಎಲ್ಲಾ ಖಾತೆಗಳನ್ನು ತಾವೇ ನಿಭಾಯಿಸುವ ತಮ್ಮಿಂದ ದಕ ಜಿಲ್ಲೆಗೆ ಕೊಡುಗೆ ಏನು? ಎಷ್ಟು ಐಟಿ ಕಂಪೆನಿಗಳನ್ನು ತಂದಿದ್ದೀರಿ? ಅಂಕಿಅಂಶಗಳನ್ನು ಕೊಡಿ ಎಂದು ಪ್ರಶ್ನಿಸಿದರು.

ನಿಮ್ಮ ಒಂದು ರೀತಿಯ ಜಿಹಾದಿ ಮನಸ್ಸು. ಕಾಂಗ್ರೆಸ್ ಬಂದ ಮೇಲೆ ಜಿಲ್ಲೆಯಲ್ಲಿ ಗಲಭೆ, ಅಶಾಂತಿ ಆಗಿದೆ ಹೊರತು ಅಭಿವೃದ್ಧಿ ಆಗಿಲ್ಲ. ದಕ ಜಿಲ್ಲೆಯವರು ಶೈಕ್ಷಣಿಕವಾಗಿ ಮುಂದುವರಿದ ಮಾದರಿ ಜನರಾಗಿದ್ದು, ಈ ರೀತಿ ತತ್ಸಾರ ಮಾತಾಡುವುದು ಬಿಡಿ. ಇಲ್ಲಿ ಹುಟ್ಟಿರುವ ಬ್ಯಾಂಕ್‌ಗಳು ಇಡೀ ದೇಶದಲ್ಲಿದೆ. ನಮ್ಮ ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜ್‌ಗಳಿದೆ. ಕಲ್ಬುರ್ಗಿಯಲ್ಲಿ ಎಷ್ಟು ಮೆಡಿಕಲ್ ಕಾಲೇಜ್ ಇದೆ? ಮಂಗಳೂರು ಅಂದ್ರೆ ಇಡೀ ದೇಶದ ಜನರು ಕಲಿಯಲು ಬರುತ್ತಾರೆ. ಇದೇ ರೀತಿ ಕಲಬುರ್ಗಿಗೆ ಬರ್ತಾರ? ಇಲ್ಲಿ ಉದ್ಯಮ ಸೃಷ್ಟಿ ಆಗಿದ್ದು ನಿಮ್ನ ಕೊಡುಗೆ ಅಲ್ಲ. ಅನೇಕ ಮಂದಿ ಜನಪ್ರತಿನಿಧಿಗಳು ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ. ನಿಮ್ಮ ಕಲ್ಬುರ್ಗಿಯಲ್ಲಿ ನಿಮ್ಮದೇ ಕುಟುಂಬದವರು ಇಷ್ಟು ವರ್ಷ ಆಡಳಿತ ಮಾಡಿದರೂ ಯಾಕೆ ಅಭಿವೃದ್ಧಿಯಾಗಿಲ್ಲ? ಕಲ್ಬುರ್ಗಿಗೆ ನಿಮ್ಮ, ನಿಮ್ಮ ಕುಟುಂಬದ ಕೊಡುಗೆ ಏನು? ಪ್ರಶ್ನಿಸಿದರು.
ಗೋವಿಂದರಾವ್ ಸಮಿತಿಯ ಸಮೀಕ್ಷೆಯ ಪ್ರಕಾರ ಹಿಂದುಳಿದ ಜಿಲ್ಲೆಯ ಪಟ್ಟಿಯಲ್ಲಿ ಕಲ್ಬುರ್ಗಿ ಇದೆ. ನಿಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡದವರು ನಮ್ಮ ಸುದ್ದಿಗೆ ಬರಬೇಡಿ. ನಿಮ್ಮ ಊರಲ್ಲಿ ಕುಡಿಯಲು ನೀರು ಸಹ ಇಲ್ಲ. ಬೆಂಗಳೂರು ಬಿಟ್ಟರೆ ಅತಿ ಹೆಚ್ಚು ತೆರಿಗೆ ಕಟ್ಟುವವರು ಮಂಗಳೂರಿಗರು ಎಂದರು.

ಅಶೋಕ್ ರೈ ವಿರುದ್ಧ ದೂರು:
ಛಲವಾದಿ ನಾರಾಯಣ ಸ್ವಾಮಿ ನಾಯಿ ಥರ.. ಪಾಪ ಬೊಗಳಿದೆ, ಅದಕ್ಕೆ ನಾವೇನೂ ಕಲ್ಲು ಎಸೆಯಲು ಹೋಗೋದಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿಕೆಗೆ ತಿರುಗೇಟು ನೀಡಿದ ಸತೀಶ್ ಕುಂಪಲ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರೀತಿ ಮಾತಾಡುವ ಸಂಸ್ಕೃತಿ ಇಲ್ಲ. ಅಭಿವೃದ್ಧಿಯ ಬಗ್ಗೆ ಎಷ್ಟು ಬೇಕಾದರೂ ಚರ್ಚೆ ಮಾಡಲಿ, ಪುತ್ತೂರಿನ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದರು. ಅದೇ ರೀತಿ ವಿನಯಕುಮಾರ್ ಸೊರಕೆ, ಸಂಜೀವ ಮಠಂದೂರು ಕೂಡ ಇದೇ ಪುತ್ತೂರಿನವರು. ಪುತ್ತೂರಿನ ಅಭಿವೃದ್ಧಿಗೆ ಕೆಲಸವನ್ನೇ ಮಾಡದ ಅಶೋಕ್ ರೈ ಅವರ ಅಸಂಬದ್ಧ ಹೇಳಿಕೆಯಿಂದ ಜನರ ಮನಸ್ಸಿಗೆ ನೋವಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ಛಲವಾದಿ ನಾರಾಯಣ ಸ್ವಾಮಿಯವರನ್ನು ಅವಹೇಳನ ಮಾಡಿದ ಅಶೋಕ್ ರೈ ವಿರುದ್ಧ ಪಕ್ಷದ ವತಿಯಿಂದ ದೂರು ನೀಡಲಾಗಿದೆ ಎಂದರು.

ಟೆಂಡರ್ ಡಾಕ್ಯುಮೆಂಡ್ ಮಾಡಲು ನಿಮ್ಮಿಂದ ಆಗಿಲ್ಲ:
ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಮಾತನಾಡಿ, ಆರೆಸ್ಸೆಸ್‌ಗೆ ಬೈದು ರಾಹುಲ್‌ಗೆ ಬಕೆಟ್ ಹಿಡಿದರೆ ದೊಡ್ಡ ಸೀಟ್ ಸಿಗುತ್ತದೆ ಎಂಬ ಭ್ರಮೆಯಲ್ಲಿ ಪ್ರಿಯಾಂಕ್ ಇದ್ದಾರೆ. ದೇಶದ ಸೇಫೆಸ್ಟ್ ಸಿಟಿಯಲ್ಲಿ ಮಂಗಳೂರು ನಂಬರ್ ವನ್. ವಿಶ್ವದಲ್ಲಿ 15ನೇ ಸುರಕ್ಷಿತ ನಗರ. ಜಿಲ್ಲೆಗೆ ಒಂದು ಐಟಿ ಕಂಪೆನಿ ಬೇಕು ಅಂತ ನಿಮ್ಮಲ್ಲಿ ಕೇಳಿದ್ರೆ ಟೆಂಡರ್ ಡಾಕ್ಯುಮೆಂಟ್ ಮಾಡಲು ನಿಮ್ಮಿಂದ ಆಗಿಲ್ಲ ಎಂದು ಆರೋಪಿಸಿದರು. ನಿಮ್ಮದು ಪರ್ಸಂಟೇಜ್ ಸರ್ಕಾರವಾಗಿದ್ದು, ಯಾವುದೇ ಫಂಡ್ ರಿಲೀಸ್ ಆಗ್ತಾ ಇಲ್ಲ. ಇದರ ಹಿಂದೆ ದೊಡ್ಡ ಮಾಫಿಯಾ ಇದೆ. ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿದೆ ಈ ರೀತಿಯ ಬೇಜವ್ಬಾರಿ ಹೇಳಿಕೆಗೆ ಖಂಡಿತಾ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಪ್ರೇಮಾನಂದ ಶೆಟ್ಟಿ, ಯತೀಶ್ ಉರ್ವ, ದಿನೇಶ್ ಅಮ್ಟೂರು, ಸಂಜಯ ಪ್ರಭು ಮತ್ತಿರರಿದ್ದರು.