ನಾಯಿ ಕಚ್ಚಿ ಸತ್ತ ಎಮ್ಮೆಯ ಹಾಲಿನ ರೈತಾ ಸೇವನೆ, 200ಕ್ಕೂ ಹೆಚ್ಚು ಮಂದಿಗೆ ಲಸಿಕೆ

ಬುಡೌನ್‌ (ಉತ್ತರ ಪ್ರದೇಶ): ನಾಯಿ ಕಚ್ಚಿ ಸಾವನ್ನಪ್ಪಿದ ಎಮ್ಮೆಯ ಹಾಲಿನಿಂದ ತಯಾರಿಸಿದ ರೈತಾ ಸೇವಿಸಿದ ಹಿನ್ನೆಲೆಯಲ್ಲಿ ಬುಡೌನ್ ಜಿಲ್ಲೆಯ ಪಿಪ್ರೌಲಿ ಗ್ರಾಮದಲ್ಲಿ ರೇಬೀಸ್ ಆತಂಕ ಮೂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮಸ್ಥರು ಸೇರಿದಂತೆ ಸುಮಾರು 200 ಮಂದಿಗೆ ರೇಬೀಸ್ ವಿರೋಧಿ ಲಸಿಕೆ ನೀಡಲಾಗಿದೆ.

ಗ್ರಾಮದಲ್ಲಿ ಡಿಸೆಂಬರ್‌ 23ರಂದು ನಡೆದ ಅಂತ್ಯಕ್ರಿಯೆ ವೇಳೆ ರೈತಾ ಬಡಿಸಲಾಗಿದ್ದು, ಇದನ್ನು ಕೆಲವು ದಿನಗಳ ಹಿಂದೆ ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿ ಅಸ್ವಸ್ಥಗೊಂಡು ಡಿಸೆಂಬರ್‌ 26ರಂದು ಮೃತಪಟ್ಟ ಎಮ್ಮೆಯ ಹಾಲಿನಿಂದ ತಯಾರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಉಜ್ನಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆದುಕೊಂಡರು.

ಮುಖ್ಯ ವೈದ್ಯಾಧಿಕಾರಿ ಡಾ. ರಾಮೇಶ್ವರ ಮಿಶ್ರಾ ಮಾತನಾಡಿ, ಎಮ್ಮೆಯೊಂದು ನಾಯಿ ಕಡಿತದಿಂದ ರೇಬೀಸ್ ಲಕ್ಷಣಗಳಿಂದ ಸಾವನ್ನಪ್ಪಿರುವ ಶಂಕೆ ಇದೆ. ಸೋಂಕಿತ ಎಮ್ಮೆಯ ಹಾಲಿನಿಂದ ತಯಾರಿಸಿದ ಆಹಾರ ಸೇವನೆಯ ಕಾರಣದಿಂದ ಮುನ್ನೆಚ್ಚರಿಕೆಯಾಗಿ ಎಲ್ಲರಿಗೂ ರೇಬೀಸ್ ಲಸಿಕೆ ನೀಡಲಾಗಿದೆ. ಸಾಮಾನ್ಯವಾಗಿ ಹಾಲನ್ನು ಕುದಿಸಿದ ಬಳಿಕ ರೇಬೀಸ್ ಸೋಂಕಿನ ಅಪಾಯವಿರುವುದಿಲ್ಲ. ಆದರೂ ಯಾವುದೇ ಸಂಭಾವ್ಯ ಅಪಾಯ ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಗ್ರಾಮದಲ್ಲಿ ಈವರೆಗೆ ರೇಬೀಸ್ ಅಥವಾ ಇತರ ರೋಗಗಳ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿ ಇದ್ದು, ಎಲ್ಲರಿಗೂ ಸಮಯಕ್ಕೆ ಸರಿಯಾಗಿ ಲಸಿಕೆ ನೀಡಲಾಗಿದೆ. ಅಗತ್ಯದ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರವನ್ನು ಶನಿವಾರ ಹಾಗೂ ಭಾನುವಾರವೂ ತೆರೆಯಲಾಗಿತ್ತು.

ಸೋಂಕಿನ ಬಗ್ಗೆ ಅನಗತ್ಯ ಭೀತಿ ಅಥವಾ ವದಂತಿ ಹರಡದಂತೆ ಗ್ರಾಮದಲ್ಲಿ ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!