ಅರಾವಳಿ ತೀರ್ಪಿಗೆ ಯು-ಟರ್ನ್: ತನ್ನದೇ ಆದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ: ಸುಪ್ರೀಂ ಕೋರ್ಟ್ ಅರಾವಳಿ ಪರ್ವತ ಶ್ರೇಣಿಗೆ ಸಂಬಂಧಿಸಿದ ನವೆಂಬರ್ 20ರ ತನ್ನ ಹಿಂದಿನ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಏಕರೂಪದ ವ್ಯಾಖ್ಯಾನ ಹಾಗೂ ಅದನ್ನು ಆಧರಿಸಿದ ಮ್ಯಾಪಿಂಗ್–ಡಿಲಿಮಿನೇಷನ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಈ ವಿಷಯವನ್ನು ಆಳವಾಗಿ ಅಧ್ಯಯನ ಮಾಡಲು ಹೊಸ ಸಮಿತಿಯನ್ನು ರಚಿಸಲಾಗಿದ್ದು, ಅಂತಿಮ ತೀರ್ಪು ಬರುವವರೆಗೆ ಈ ತಡೆ ಜಾರಿಯಲ್ಲಿರಲಿದೆ. ಆದರೆ, ಪ್ರಸ್ತುತ ಸ್ಥಿತಿಗತಿಗಳಂತೆ ಅರಾವಳಿ ಪ್ರದೇಶಗಳಲ್ಲಿ ಹೊಸ ಗಣಿಗಾರಿಕೆ ಗುತ್ತಿಗೆಗಳು ಹಾಗೂ ಹಳೆಯ ಗುತ್ತಿಗೆಗಳ ನವೀಕರಣದ ಮೇಲೆ ವಿಧಿಸಲಾದ ಗಣಿಗಾರಿಕೆ ನಿಷೇಧ ಮುಂದುವರಿಯಲಿದೆ, ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ, ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಹಾಗೂ ಎ.ಜಿ. ಮಸಿಹ್ ಒಳಗೊಂಡ ನ್ಯಾಯಪೀಠವು ಈ ವಿಷಯವನ್ನು ಸ್ವಯಂ ಪ್ರೇರಿತವಾಗಿ ವಿಚಾರಿಸಿ ಮಧ್ಯಂತರ ತಡೆಯಾಜ್ಞೆ ನೀಡಿದೆ. ಜೊತೆಗೆ ಕೇಂದ್ರ ಸರ್ಕಾರ ಹಾಗೂ ನಾಲ್ಕು ಅರಾವಳಿ ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿದ್ದು, ಜನವರಿ 21ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ನವೆಂಬರ್ 20ರ ತೀರ್ಪಿನಲ್ಲಿ ಅರಾವಳಿ ಬೆಟ್ಟಗಳ ಏಕರೂಪದ ವ್ಯಾಖ್ಯಾನವನ್ನು ಅಂಗೀಕರಿಸಿ, ತಜ್ಞರ ವರದಿ ಬರುವವರೆಗೆ ಹೊಸ ಗಣಿಗಾರಿಕೆಗೆ ಬ್ರೇಕ್ ಹಾಕಲಾಗಿತ್ತು. ಇದೀಗ ಆ ತೀರ್ಪಿಗೆ ತಡೆ ನೀಡಿರುವುದರಿಂದ, ಕೇಂದ್ರ ಪರಿಸರ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳು ಆರಂಭಿಸಿದ್ದ ಅರಾವಳಿ ಪ್ರದೇಶಗಳ ಮ್ಯಾಪಿಂಗ್ ಹಾಗೂ ಗುರುತಿಸುವ ಪ್ರಕ್ರಿಯೆಗೂ ತಾತ್ಕಾಲಿಕ ಅಡ್ಡಿಯಾಗುವ ಸಾಧ್ಯತೆ ಇದೆ.

error: Content is protected !!