ಮಂಗಳೂರು: ಪುತ್ತೂರು ಡೆಲಿವರಿ ಪ್ರಕರಣದಲ್ಲಿ ಆರೋಪಿ ಶ್ರೀಕೃಷ್ಣನ ಕುಟುಂಬದವರು ವಿಧಿಸಲಾಗಿರುವ ಷರತ್ತುಗಳು ಒಪ್ಪಿಕೊಳ್ಳಲೂ ಸಾಧ್ಯವಿಲ್ಲದ ಮಟ್ಟದಲ್ಲಿವೆ. ಹಿರಿಯ ವಕೀಲರೊಂದಿಗೆ ಚರ್ಚೆ ನಡೆಸಿದ ಬಳಿಕ ಕೆಲವೇ ದಿನಗಳಲ್ಲಿ ಆ ಕಂಡೀಷನ್‌ಗಳನ್ನು ದಾಖಲೆ ಸಮೇತ ಬಹಿರಂಗಪಡಿಸಲಾಗುವುದು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ತಿಳಿಸಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪುಟಾಣಿ ಮಗುವಿನ ಜೊತೆ ಸಂತ್ರಸ್ತೆ, ಈಕೆಯ ತಾಯಿ ಹಾಗೂ ಕುಟುಂಬಿಕರೊಂದಿಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಎನ್‌ಎ ಪರೀಕ್ಷಾ ಪ್ರಕ್ರಿಯೆಗೆ ಸುಮಾರು ಮೂರು ತಿಂಗಳು ಸಮಯ ತೆಗೆದುಕೊಂಡಿದ್ದು, ಈ ಅವಧಿಯಲ್ಲಿ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದ್ದ ಕಾರಣ ಉದ್ದೇಶಪೂರ್ವಕವಾಗಿ ಮೌನ ವಹಿಸಬೇಕಾಯಿತು ಎಂದು ಸ್ಪಷ್ಟಪಡಿಸಿದರು. “ಈ ಅವಧಿಯಲ್ಲಿ ನಾನು ಆರೋಪಿಗಳೊಂದಿಗೆ ಶಮೀಲಾಗಿದ್ದೇನೆ ಎಂಬ ಆರೋಪಗಳು ನನ್ನ ಮೇಲೆ ಬಂದವು. ಸಂತ್ರಸ್ಥೆ ಪರ ಹೋರಾಟ ನಡೆಸುವವರೇ ನಾನೇಕೆ ಸುಮ್ಮನಾದೆ ಎಂದು ಪ್ರಶ್ನಿಸಿದರು. ಆದರೆ ನಾನು ಹಣಕ್ಕೆ ಬಗ್ಗುವವನು ಅಲ್ಲ. ಪ್ರಚಾರಕ್ಕಾಗಿ ಅಲ್ಲ, ನ್ಯಾಯಕ್ಕಾಗಿ, ಪ್ರಚಾರರಹಿತ ಹೋರಾಟ ನಡೆಸುವುದು ನಮ್ಮ ಉದ್ದೇಶವಾಗಿತ್ತು” ಎಂದು ಹೇಳಿದರು.

ಕಲ್ಲಡ್ಕ ಪ್ರಭಾಕರ ಭಟ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಜೊತೆ ಜಗನ್ನಿವಾಸ ರಾವ್ ಭೇಟಿ ಮಾಡಿ, ಪ್ರಕರಣವನ್ನು ಮಾತುಕತೆಯ ಮೂಲಕವೇ ಸುಖಾಂತ್ಯಕ್ಕೆ ಕೊಂಡೊಯ್ಯಲು ಪ್ರಯತ್ನಿಸಲಾಯಿತು. ತೂಕವಾದ ವ್ಯಕ್ತಿಗಳು, ಸಮಾಜದ ಪ್ರಮುಖರು ಹಾಗೂ ರಾಜಕೀಯ ನಾಯಕರುಗಳೊಂದಿಗೆ ಮಾತುಕತೆ ನಡೆಸಿ ಸಂಧಾನಕ್ಕೆ ಪ್ರಯತ್ನಿಸಲಾಗಿತ್ತು. “ಹರಿದ ಬಟ್ಟೆಯನ್ನು ಮತ್ತೆ ಹೊಲಿಯುವಂತೆ ಅನೇಕ ಬಾರಿ ಸಂಧಾನಕ್ಕೆ ಕೈ ಹಾಕಿದೆವು. ಆದರೆ ಇದೀಗ ಆರೋಪಿಗಳು ಅಸಂಗತ ಹಾಗೂ ಕಠಿಣ ಷರತ್ತುಗಳನ್ನು ಮುಂದಿಟ್ಟಿರುವುದರಿಂದ ಸಂಧಾನ ಸಂಪೂರ್ಣವಾಗಿ ಮುರಿದುಬಿದ್ದಿದೆ. ಇನ್ನು ಯಾವುದೇ ಸಂಧಾನಕ್ಕೆ ಅರ್ಥವಿಲ್ಲ” ಎಂದು ನಂಜುಂಡಿ ಖಡಕ್ ಆಗಿ ಹೇಳಿದರು.

ಪುತ್ತೂರು ಹಿಂದುತ್ವದ ಕಲಶವಾಗಿದ್ದು, ವಿಶ್ವಕರ್ಮ ಸಮುದಾಯವೂ ಹಿಂದುತ್ವದ ಮೌಲ್ಯಗಳನ್ನು ನಂಬಿಕೊಂಡು ಬದುಕುತ್ತಿರುವ ಸಮಾಜವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಸಮಾಜದ ಹೆಣ್ಣುಮಗುವಿಗೆ ಅನ್ಯಾಯವಾದರೆ ರಕ್ಷಣೆ ನೀಡುವವರು ಯಾರು? ನಮ್ಮದು ಚಿಕ್ಕ ಸಮುದಾಯ ಆಗಿದ್ದರೂ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ. ಗುಡಿಗೋಪುರಗಳಂತಹ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಮ್ಮ ಸಮುದಾಯಕ್ಕೆ ಈ ಪ್ರಕರಣದಲ್ಲಿ ನ್ಯಾಯ ಸಿಗದಿರುವುದು ತೀವ್ರ ಬೇಸರ ತಂದಿದೆ. ಎಲ್ಲವೂ ಸುಖಾಂತ್ಯವಾಗಬೇಕು ಎಂಬ ಉದ್ದೇಶದಿಂದ ಸಂಧಾನಕ್ಕೆ ಪ್ರಯತ್ನಿಸಿದರೂ, ಡಿಎನ್‌ಎ ವರದಿಯಲ್ಲಿ ಮಗುವಿನ ತಂದೆ ಸ್ಪಷ್ಟವಾಗಿ ದೃಢಪಟ್ಟಿದ್ದರೂ ಆರೋಪಿಯು ಇನ್ನೂ ಮಗುವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವುದು ನಿಜಕ್ಕೂ ದುರಂತ. ಈ ಹಿನ್ನೆಲೆಯಲ್ಲಿ ಸೀನಿಯರ್ ವಕೀಲರ ಮೂಲಕ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಲಾಗಿದ್ದು, ಇನ್ನು ಮುಂದೆ ಕಾನೂನು ಹೋರಾಟವೇ ಏಕೈಕ ದಾರಿಯಾಗಿದೆ ಎಂದು ತಿಳಿಸಿದರು.

“ಸಂತ್ರಸ್ತೆ ಮತ್ತು ಅವರ ಕುಟುಂಬಕ್ಕೆ ಕಾನೂನಿನಡಿ ಖಂಡಿತವಾಗಿ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ. ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುವವರೆಗೆ ಸಂತ್ರಸ್ಥರ ಬೆನ್ನ ಹಿಂದೆ ನಾನು ನಿಂತೇ ಇರುತ್ತೇನೆ. ನ್ಯಾಯಾಲಯದಿಂದಲೇ ನ್ಯಾಯ ದೊರೆಯುತ್ತದೆ” ಎಂದು ನಂಜುಂಡಿ ಭರವಸೆ ನೀಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ಥೆ, ಈಕೆಯ ತಾಯಿ ನಮಿತಾ ಆಚಾರ್ಯ, ಮುಖಂಡರಾದ ರಾಜೇಶ್ ಆಚಾರ್ಯ ಹಾಗೂ ಲೋಕೇಶ್ ಆಚಾರ್ಯ ಉಪಸ್ಥಿತರಿದ್ದರು.